ಮಡಿಕೇರಿ, ಫೆ. 8 : ಮಡಿಕೇರಿಯ ಕ್ರೆಸೆಂಟ್ ಶಾಲೆ ಹಾಗೂ ಪಿ.ಪಿ.ಫೌಂಡೇಷನ್ ವತಿಯಿಂದ ಫೆ.9 ರಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಉಚಿತ ಶೈಕ್ಷಣಿಕ ಸಲಹಾ ಶಿಬಿರ ನಗರದಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಶಿಬಿರದ ಲಾಭ ಪಡೆದುಕೊಳ್ಳುವಂತೆ ಶಾಲೆಯ ಗೌರವ ಕಾರ್ಯದರ್ಶಿ ಜಿ.ಹೆಚ್.ಮಹಮ್ಮದ್ ಹನೀಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಗ್ಮಾ ಸಂಸ್ಥೆಯ ಸಿಇಓ, ಶಿಕ್ಷಣ ತಜ್ಞ ಹಾಗೂ ಖ್ಯಾತ ವಾಗ್ಮಿ ಅಮೀನ್ ಎ. ಮುದಸ್ಸರ್ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಹೆಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗೆ ಬೇಕಾಗುವ ತಯಾರಿಯನ್ನು ಮಾಡಿಕೊಳ್ಳುವದಕ್ಕೂ, ತಮ್ಮ ನೆನಪಿನ ಶಕ್ತಿಯನ್ನು ಉತ್ತಮಗೊಳಿಸಲಿಕ್ಕೂ, ಅಧ್ಯಯನ ಮತ್ತು ಜೀವನದ ಯಶಸ್ಸಿನ ತಂತ್ರವನ್ನು ಅರಿಯಲು, ಭವಿಷ್ಯದ ವೃತ್ತಿಯನ್ನು ಕೈಗೊಳ್ಳುವ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಮತ್ತು ತಾವು ಭವಿಷ್ಯವನ್ನು ಯಾವ ರೀತಿ ಉತ್ತಮಗೊಳಿಸಬಹುದು ಎಂಬದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.
ಕಾರ್ಯಗಾರಕ್ಕೆ ಯಾವದೇ ಶುಲ್ಕವಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನೋಟ್ ಪುಸ್ತಕ ಹಾಗೂ ಪೆನ್ ತರಬೇಕು ಎಂದು ಜಿ.ಹೆಚ್ ಮಹಮ್ಮದ್ ಹನೀಫ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲೆಯ ನಿರ್ದೆಶಕ ಸಿ.ಎಂ.ಉಮ್ಮರ್ ಉಪಸ್ಥಿತರಿದ್ದರು.