ಮಡಿಕೇರಿ, ಫೆ. 8: ಇತ್ತೀಚೆಗೆ ನವದೆಹಲಿಯಲ್ಲಿ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಪೊಣ್ಣನ್ನ ಎನ್.ಎನ್. ಮತ್ತು ತೇಜಸ್ ಬಿ.ಎಸ್. ಅವರನ್ನು ಕಾಲೇಜಿನಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ತೇಜಸ್ ಬಿ.ಎಸ್. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಎಷ್ಟೊಂದು ಕೀರ್ತಿ ಇದೆ ಎಂಬುದು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಹೋದಾಗ ಅರಿವಾಗಿದೆ. ದೆಹಲಿಯಲ್ಲಿ ಮಡಿಕೇರಿಯಿಂದ ಬಂದಿದ್ದು ಎಂದರೆ ಯಾರಿಗೂ ಅರಿವಾಗುತ್ತಿರಲಿಲ್ಲ. ಆದರೆ ನಾವು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹುಟ್ಟೂರಿನಿಂದ ಬಂದಿದ್ದೇವೆ ಎಂದರೆ, ಎಲ್ಲರಿಗೂ ಅರಿವಾಗುತ್ತಿತ್ತು. ಸಾಲದಕ್ಕೆ, ನಮಗೆ ಮತ್ತಷ್ಟು ಗೌರವ ಕೊಡುತ್ತಿದ್ದರು. ಮಡಿಕೇರಿಯಲ್ಲಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.

ದ್ವಿತೀಯ ಬಿಎ ಇಜೆಎಸ್ ವಿದ್ಯಾರ್ಥಿ ಎನ್.ಎನ್. ಪೊಣ್ಣನ್ನ ಅನುಭವ ಹಂಚಿಕೊಳ್ಳುತ್ತಾ, ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಹೆಮ್ಮೆಯಿದೆ. ಕಾಲೇಜಿನಲ್ಲಿ ಪ್ರಾರಂಭವಾದ ಕಠಿಣ ಪಥಸಂಚಲನ ಅಭ್ಯಾಸ ದೆಹಲಿಯ ರಾಜಪಥ್‍ವರೆಗೆ ಕರೆದುಕೊಂಡು ಹೋಗಿದ್ದು, ಜೀವನದಲ್ಲಿ ಮರೆಯಲಾಗದ ಸಂಗತಿಯಾಗಿದ್ದು, ಇದು ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಪೂರ್ತಿದಾಯಕವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ.ಡಿ. ತಿಮ್ಮಯ್ಯ, ಎನ್‍ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ ಬಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ರವಿಶಂಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೊಣ್ಣನ್ನ ಎನ್ ಎನ್ ಮತ್ತು ತೇಜಸ್ ಬಿ ಎಸ್ ಅವರ ಪೋಷಕರು, ಕಾಲೇಜಿನ ಎಲ್ಲಾ ಎನ್‍ಸಿಸಿ ಕೆಡೆಟ್‍ಗಳು, ಬೋದಕ ಬೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ವರದಿ: ಚರಣ್ ಜಿ, ರಾಜೇಶ್ ನಾಯ್ಕ್, ದ್ವಿತೀಯ ಪತ್ರಿಕೋದ್ಯಮ