ಸೋಮವಾರಪೇಟೆ, ಫೆ. 8: ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಜಲಪ್ರಳಯ, ಮಹಾಮಳೆಯಿಂದ ಇಲ್ಲಿನ ಬೆಳೆಗಾರ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸಣ್ಣ ಹಾಗೂ ಮಧ್ಯಮ ಕಾಫಿ ಬೆಳೆಗಾರ ರಿದ್ದು, ಪ್ರಸಕ್ತ ಸಾಲಿನ ಕಾಫಿಯಲ್ಲಿ ಶೇ. 70ರಷ್ಟು ಈಗಾಗಲೇ ಮಾರಾಟ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬೆಳೆಗಾರರು ಕಾಫಿ ತೋಟವನ್ನು ಉಳಿಸಿಕೊಳ್ಳಲೂ ಸಹ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣ ವಾಗಿದ್ದು, ನಿರ್ವಹಣಾ ವೆಚ್ಚವನ್ನೂ ಭರಿಸಲು ಸಾಧ್ಯವಾಗದ ಹಿನ್ನೆಲೆ ಕಾಫಿಯನ್ನು ಮಾರಾಟ ಮಾಡುತ್ತಿದ್ದಾರೆ. ಅಧಿಕ ಕೂಲಿ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬೆಲೆ, ಕಾರ್ಮಿಕರ ಸಾಗಾಟ, ಕಾಫಿ ಕೊಯ್ಲಿಗೆ ನೀಡುವ ಕೂಲಿ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳನ್ನು ನಿಭಾಯಿಸಲು ಬೆಳೆಗಾರರು ಹೈರಾಣಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಾಫಿಯ ಫಸಲೂ ಕಡಿಮೆ ಇದ್ದು, ಅಧಿಕ ಮಳೆಯ ಹಿನ್ನೆಲೆ ಅರೇಬಿಕಾ ಚೆರ್ರಿ ಜೊಳ್ಳಾಗಿದೆ. ಪ್ರಸ್ತುತ 50 ಕೆ.ಜಿ. ತೂಕದ 1 ಬ್ಯಾಗ್ ಅರೇಬಿಕಾ ಪಾರ್ಚಮೆಂಟ್ ಕಾಫಿಗೆ 7100 ರೂಪಾಯಿಗಳಿದ್ದು, ಚೆರ್ರಿಗೆ 3400 ಇದೆ. ರೋಬಸ್ಟಾ ಪಾರ್ಚಮೆಂಟ್‍ಗೆ 6400 ಇದ್ದು, ಚೆರ್ರಿಗೆ 3000ರ ಆಸುಪಾಸಿನ ಬೆಲೆ ಇದೆ. ಕಳೆದ ವರ್ಷ ಕಾಫಿಗೆ 7600 ವರೆಗೂ ಬೆಲೆ ಇತ್ತು. ಈ ವರ್ಷ ಬೆಲೆ ಇಳಿಕೆ ಯಾಗಿರುವದರೊಂದಿಗೆ ಕಾಫಿಯ ಇಳುವರಿಯಲ್ಲೂ ಇಳಿಕೆಯಾಗಿದೆ.

124.74 ಕೋಟಿ ನಷ್ಟ: ಪ್ರಾಥಮಿಕ ಸರ್ವೆಯ ಪ್ರಕಾರ ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡಿದ್ದು, 124.74 ಕೋಟಿ ರೂಪಾಯಿ ನಷ್ಟ ಸಂಭವಿಸಿ ರುವ ಬಗ್ಗೆ ಅಂದಾಜಿಸಲಾಗಿದೆ.

ಶಾಂತಳ್ಳಿ ಹೋಬಳಿಯಲ್ಲಿ ಶೇ. 50 ರಿಂದ 100ರಷ್ಟು ಕಾಫಿ ನೆಲಕ್ಕಚ್ಚಿದೆ. ಸೋಮವಾರಪೇಟೆ ಹೋಬಳಿಯಲ್ಲಿ ಶೇ. 25 ರಿಂದ 50 ರಷ್ಟು ಕಾಫಿ ನಷ್ಟಗೊಂಡಿರುವ ಬಗ್ಗೆ ಪ್ರಾಥಮಿಕ ಸರ್ವೆಯಲ್ಲಿ ದಾಖಲಿಸಲಾಗಿದೆ.

ಮುಂಗಾರು ಪೂರ್ವದಲ್ಲಿ ಸೋಮವಾರಪೇಟೆ ವಿಭಾಗಕ್ಕೆ ಸಂಬಂಧಿಸಿದಂತೆ 6,400 ಮೆಟ್ರಿಕ್ ಟನ್ ಅರೇಬಿಕಾ, 470 ಮೆಟ್ರಿಕ್ ಟನ್ ರೋಬಸ್ಟಾ ಸೇರಿದಂತೆ 6870 ಮೆ.ಟನ್ ಕಾಫಿ ಉತ್ಪಾದನೆಯ ಗುರಿ ಹೊಂದಲಾಗಿದ್ದು, ನಂತರದ ಅತೀವೃಷ್ಟಿಯಿಂದ 1,718 ಮೆ.ಟನ್ ನಷ್ಟವಾಗುವ ಮೂಲಕ ರೂ. 25.76 ಕೋಟಿ (ಕೆ.ಜಿ.ಗೆ ಸರಾಸರಿ 150 ರೂಪಾಯಿಗಳಂತೆ) ನಷ್ಟಕ್ಕೀಡಾಗಿದೆ.

ಶನಿವಾರಸಂತೆ ವಿಭಾಗದಲ್ಲಿ 5238 ಅರೇಬಿಕಾ, 612 ರೋಬಸ್ಟಾ ಸೇರಿದಂತೆ 5,850 ಮೆ.ಟನ್ ಉತ್ಪಾದನೆಯ ಗುರಿ ಇದ್ದು, ಆ ಭಾಗದಲ್ಲಿ 878 ಮೆ.ಟನ್ (13.16 ಕೋಟಿ) ನಷ್ಟಕ್ಕೊಳಗಾಗಿದೆ. ಸುಂಟಿಕೊಪ್ಪ ವಿಭಾಗದಲ್ಲಿ 5,500 ಅರೇಬಿಕಾ, 6,000 ರೋಬಸ್ಟಾ ಸೇರಿದಂತೆ 11,500 ಮೆ.ಟನ್‍ನ ಗುರಿ ಹೊಂದಲಾಗಿದ್ದು, 3,450 ಮೆ.ಟನ್ ಕಾಫಿ ಅತೀವೃಷ್ಟಿಯಿಂದ ನಷ್ಟ ಗೊಂಡಿದ್ದು, 51.75 ಕೋಟಿ ನಷ್ಟವನ್ನು ಅಂದಾಜಿಸಲಾಗಿದೆ. ಮಾದಾಪುರ ವಿಭಾಗಕ್ಕೆ ಸಂಬಂಧಿಸಿದಂತೆ 2,050 ಅರೇಬಿಕಾ, 1,450 ರೋಬಸ್ಟಾ ಸೇರಿದಂತೆ 3,500 ಮೆ.ಟನ್‍ನಷ್ಟು ಉತ್ಪಾದನಾ ಗುರಿ ಹೊಂದಲಾಗಿದ್ದು, ಇದರಲ್ಲಿ 1,750 ಮೆಟ್ರಿಕ್ ಟನ್‍ನಷ್ಟು (ರೂ. 26.25 ಕೋಟಿ) ನಷ್ಟ ಸಂಭವಿಸಿದೆ.

ಒಟ್ಟಾರೆ ತಾಲೂಕಿನಲ್ಲಿ 19,188 ಅರೇಬಿಕಾ, 8,532 ರೋಬಸ್ಟಾ ಸೇರಿದಂತೆ 27,720 ಮೆಟ್ರಿಕ್ ಟನ್ ಉತ್ಪಾದನಾ ಗುರಿಯಲ್ಲಿ, ಭಯಾನಕ ಅತಿವೃಷ್ಟಿಗೆ 8316 ಮೆ.ಟನ್ ನಷ್ಟಗೊಳ್ಳುವ ಮೂಲಕ 124.74 ಕೋಟಿ ನಷ್ಟ ಸಂಭವಿಸಿರುವ ಬಗ್ಗೆ ಪ್ರಾಥಮಿಕವಾಗಿ ಅಂಕಿಅಂಶ ದೊರೆತಿದೆ. ಸೋಮವಾರಪೇಟೆಯಲ್ಲಿ 6,900 ಹೆಕ್ಟೇರ್‍ನಲ್ಲಿ ಅರೇಬಿಕಾ, 400 ಹೆಕ್ಟೇರ್‍ನಲ್ಲಿ ರೋಬಸ್ಟಾ ಸೇರಿದಂತೆ 7,300 ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯ ಲಾಗುತ್ತಿದೆ. ಶನಿವಾರಸಂತೆಯಲ್ಲಿ 6,740 ಅರೇಬಿಕಾ, 270 ರೋಬಸ್ಟಾ ಸೇರಿದಂತೆ 7,010, ಸುಂಟಿಕೊಪ್ಪದಲ್ಲಿ ಕ್ರಮವಾಗಿ 6,660 ಮತ್ತು 3,820 ಸೇರಿದಂತೆ 10,480 ಹೆಕ್ಟೇರ್, ಮಾದಾಪುರದಲ್ಲಿ 2,600 ಮತ್ತು 1200 ಸೇರಿದಂತೆ 3,800 ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಒಟ್ಟು ತಾಲೂಕಿನಲ್ಲಿ 28,590 ಹೆಕ್ಟೇರ್‍ನಲ್ಲಿ ಕಾಫಿ ಉತ್ಪಾದನೆಯಾಗುತ್ತಿದೆ.

ಸೋಮವಾರಪೇಟೆಯಲ್ಲಿ 2,645 ಮಂದಿ 5 ಎಕರೆಗಿಂತ ಕಡಿಮೆ ಕಾಫಿ ತೋಟ ಹೊಂದಿದವರಾಗಿದ್ದು, 875 ಮಂದಿ 5 ಎಕರೆಗಿಂತಲೂ ಅಧಿಕ ಕಾಫಿ ತೋಟ ಹೊಂದಿದ್ದಾರೆ. ಅದರಂತೆ ಶನಿವಾರಸಂತೆಯಲ್ಲಿ 1,442 ಮತ್ತು 1,078, ಸುಂಟಿಕೊಪ್ಪ ದಲ್ಲಿ 1,465 ಮತ್ತು 1,022, ಮಾದಾಪುರ ದಲ್ಲಿ 300 ಮಂದಿ ಸಣ್ಣ ಬೆಳೆಗಾರರು ಮತ್ತು 600 ಮಂದಿ 5 ಎಕರೆಗಿಂತಲೂ ಅಧಿಕ ಕಾಫಿ ತೋಟ ಹೊಂದಿದವರು ಇದ್ದಾರೆ. ಒಟ್ಟಾರೆ ತಾಲೂಕಿನಲ್ಲಿ 5,852 ಮಂದಿ 5 ಎಕರೆ ಒಳಗೆ, 3,575 ಮಂದಿ 5 ಎಕರೆ ಮೇಲ್ಪಟ್ಟು ಕಾಫಿ ತೋಟ ಹೊಂದಿದವರಿದ್ದಾರೆ.

ಸರ್ಕಾರ ಕಾಫಿ ಬೆಳೆಗಾರರ ಪರ ನಿಲ್ಲುವ ಮೂಲಕ ಬೆಳೆಗಾರರ ಹಿತ ಕಾಪಾಡಬೇಕು. ಕಾಫಿ ತೋಟದ ನಿರ್ವಹಣೆಗೆ ನೂತನ ಯೋಜನೆ ಗಳನ್ನು ಜಾರಿಗೆ ತರಬೇಕು ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಪತ್ರಿಕೆ ಯೊಂದಿಗೆ ಅಭಿಪ್ರಾಯಿಸಿದ್ದಾರೆ.

-ವಿಜಯ್ ಹಾನಗಲ್