ಶನಿವಾರಸಂತೆ, ಫೆ. 8: ಜಿಲ್ಲೆಯಲ್ಲೇ ದೊಡ್ಡ ಜಾತ್ರೋತ್ಸವ ಎಂಬ ಖ್ಯಾತಿಯಿರುವ ಗುಡುಗಳಲೆ ಜಯದೇವ ಜಾನುವಾರು ಜಾತ್ರೆಯ ಮತ್ತೊಮ್ಮೆ ಗತ ವೈಭವವನ್ನು ಮರಳಿ ಪಡೆಯುತ್ತಿದೆ. ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆ ಇತ್ತೀಚಿನ ವರ್ಷಗಳಲ್ಲಿ ನೀರಸವಾಗಿದ್ದರೂ ಇದೀಗ ಜನಾಕರ್ಷಣೆಯಾಗಿ ಮೆರೆಯುತ್ತಿದೆ. ಹಿಂದೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸುಮಾರು 2ರಿಂದ 3 ಸಹಸ್ರ ಜಾನುವಾರುಗಳು ಆಗಮಿಸುತ್ತಿದ್ದವು. ಆದರೆ ಇದೀಗ ಕೇವಲ 150 ರಿಂದ 200 ಜಾನುವಾರುಗಳು ಇಲ್ಲಿಗೆ ಆಗಮಿಸುತ್ತಿವೆ.

ಈ ವರ್ಷ ಹಂಡ್ಲಿ ಪಂಚಾಯಿತಿಯ ಜಾತ್ರಾ ಆಡಳಿತ ಮಂಡಳಿಯವರು ಜಾತ್ರೆಗೆ ಆಗಮಿಸಿರುವ ಪ್ರತಿಯೊಂದು ಜಾನುವಾರುಗಳಿಗೆ ಜಾತ್ರೆಯ ವರಮಾನದಿಂದ ದಿನವೊಂದಕ್ಕೆ 1 ಕೆ.ಜಿ ಪೀಡ್ಸ್ (ಆಹಾರ) ನೀಡಲಾಗುತ್ತಿದೆ ಎಂದು ಜಾತ್ರಾ ಆಡಳಿತ ಮಂಡಳಿಯ ಸಂದೀಪ ಪತ್ರಿಕೆಗೆ ತಿಳಿಸಿರುತ್ತಾರೆ.

ಮಣಿ, ಬಳೆ ಸರಗಳ ಅಂಗಡಿ ಮಳಿಗೆಗಳು ಮಹಿಳೆಯರನ್ನು ಆಕರ್ಷಿಸುತ್ತಿದೆ ಹೊಟೇಲ್‍ಗಳಲ್ಲಿ ವ್ಯಾಪಾರ ಶುರುವಾಗಿದೆ. ಕರಬೂಜ ಹಣ್ಣಿನ ಮಳಿಗೆಯೊಂದು ಜನರ ದಣಿವಾರಿಸಲು ಸಜ್ಜಾಗಿದೆ. ಸಿಹಿ ತಿಂಡಿಗಳ ಮಳಿಗೆಗಳಲ್ಲಿ ವ್ಯಾಪಾರ ಸಾಗಿದೆ. ಇದರೊಂದಿಗೆ ಜೈಂಟ್ ವೀಲ್, ಕೊಲಂಬಸ್, ಮರಣದ ಬಾವಿ, ರೈಲು ಇತ್ಯಾದಿಗಳು ಮಕ್ಕಳ ಮನೋರಂಜನೆಗೆ ಸಿದ್ಧಗೊಂಡಿವೆ. ತಾ.10 ರವರೆಗೆ ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಹಾಗೂ ವಿವಿಧ ರೀತಿಯ ಕಾರ್ಯಕ್ರಮಗಳು ಇರುತ್ತವೆ.

ಪ್ರಮುಖವಾಗಿ ರೈತರ ಹಬ್ಬವಾದ ಜಾನುವಾರು ಜಾತ್ರೆ ಐತಿಹಾಸಿಕ ಮಹತ್ವ ಮತ್ತು ಸಾಂಸ್ಕøತಿಕ ಹಿನ್ನೆಲೆಯ ಹಬ್ಬವಾಗಿ ನಡೆಯುತ್ತಿದೆ. ಈ ವರ್ಷದ ಜಾತ್ರೆಗೆ ತಾ.11 ರಂದು ಮುಕ್ತಾಯ ಸಮಾರಂಭದ ತೆರೆ ಬೀಳಲಿದೆ.

-ನರೇಶಚಂದ್ರ ಶನಿವಾರಸಂತೆ