ಮಡಿಕೇರಿ, ಫೆ. 8: ಕಳೆದ ಮೇ ಹಾಗೂ ಜೂನ್ ತಿಂಗಳಿನಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಅಷ್ಟಮಂಗಲ ವೇಳೆ ದೈವಜ್ಞರಿಂದ ಜ್ಯೋತಿಷ್ಯ ಪ್ರಶ್ನೆಯಲ್ಲಿ ಕಂಡುಬಂದಿರುವಂತೆ, ಭೂಗತ ಅಗಸ್ತ್ಯೇಶ್ವರ ಭಗ್ನ ಬಿಂಬವನ್ನು ತಮಿಳುನಾಡಿನಲ್ಲಿ ಕಾವೇರಿಯ ಸಮುದ್ರ ಸಂಗಮ ಸ್ಥಳ ಪೂಂಪೂಹಾರ್‍ನಲ್ಲಿ ವಿಸರ್ಜಿಸ ಲಾಗುವದು ಎಂದು ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಪ್ರಕಟಿಸಿದರು.ಇಂದು ಕ್ಷೇತ್ರದಲ್ಲಿ ಕೇರಳದ ದೈವಜ್ಞ ನಾರಾಯಣ ಪೊದುವಾಳ್ ಅವರಿಂದ ಪ್ರಶ್ನೆ ವಿಮರ್ಶೆ ಮೂಲಕ ದೇವರ ಅನುಗ್ರಹದಂತೆ ಈ ನಿರ್ಧಾರ ವನ್ನು ತಂತ್ರಿಗಳು ಸ್ಪಷ್ಟಪಡಿಸಿದರು.ಹಿಂದಿನ ಅಷ್ಟಮಂಗಲದಲ್ಲಿ ನಿವೃತ್ತಿ ಧನುರಾಶಿಯಲ್ಲಿ ಪ್ರಾಪ್ತವಾದ ದೇವರ ಅನುಗ್ರಹದಂತೆ ಅಗಸ್ತ್ಯೇಶ್ವರ ಗುಡಿಯಲ್ಲಿ 2007ರಲ್ಲಿ ಭೂಗತಗೊಳಿಸ ಲಾಗಿದ್ದ ಹಳೆಯ ಛೇದಗೊಂಡಿರುವ ಬಿಂಬವನ್ನು ಹೊರ ತೆಗೆದು ಪೂಂಪೂಹಾರ್‍ನಲ್ಲಿ ವಿಸರ್ಜಿಸುವ ನಿರ್ಣಯವನ್ನು ಇಂದು ವಿಮರ್ಶೆ ಮೂಲಕ ಸ್ಥಿರೀಕರಿಸುವದಾಗಿ ಪದ್ಮನಾಭ ತಂತ್ರಿಗಳು ಘೋಷಿಸಿ ದರಲ್ಲದೆ, ಈ ಹಿಂದೆಯೂ ಭೂಗತ ಲಿಂಗವನ್ನು ವಿಸರ್ಜಿಸಬೇಕೆಂದು ಅಂದಿನ ಹಿರಿಯ ತಂತ್ರಿಗಳು ಅಭಿಪ್ರಾಯಪಟ್ಟಿದ್ದ ಅಂಶವನ್ನು ಜನಾಭಿಪ್ರಾಯದಂತೆ ತಾವು ಮತ್ತೊಮ್ಮೆ ಸ್ಥಿರೀಕರಿಸಿರುವದಾಗಿಯೂ ಅವರು ಮಾರ್ನುಡಿದರು.ಇಂದು ಕೇರಳದ ದೈವಜ್ಞ ನಾರಾಯಣ ಪೊದುವಾಳ್ ಸಮ್ಮುಖ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಅರ್ಚಕವರ್ಗ, ವ್ಯವಸ್ಥಾಪನಾ ಸಮಿತಿ, ಅಧಿಕಾರಿ ವರ್ಗ, ಭಕ್ತ (ಮೊದಲ ಪುಟದಿಂದ) ಸಮೂಹದ ಸಮ್ಮುಖದಲ್ಲಿ ಈ ಬಗ್ಗೆ ಅಭಿಪ್ರಾಯ ಕ್ರೋಢೀಕರಣದೊಂದಿಗೆ ಅಂತಿಮವಾಗಿ ತಂತ್ರಿಗಳು ಏಪ್ರಿಲ್ 12 ರಂದು ಪೂಂಪೂಹಾರ್‍ನಲ್ಲಿ ಛೇದಗೊಂಡಿರುವ ಬಿಂಬವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಗುವದು ಎಂದು ಘೋಷಿಸಿದರು.

ಏ. 5 ರಿಂದ ದೈವಿಕ ಕೈಂಕರ್ಯ

ಛೇದ ಲಿಂಗದಿಂದ 2007ರ ಪ್ರತಿಷ್ಠಾಪಿತ ಲಿಂಗಕ್ಕೆ ಸರ್ವಶಕ್ತಿಯನ್ನು ಸಂಯೋಜನೆಯೊಂದಿಗೆ, ಏ. 10 ರಂದು ಪುನರ್ ಪ್ರತಿಷ್ಠಾಪಿಸ ಲಾಗುವದು ಎಂದು ತಂತ್ರಿಗಳು ಸ್ಪಷ್ಟಪಡಿಸಿದರು. ಈ ಸಲುವಾಗಿ ಏ. 5 ರಿಂದ ದೈವಿಕ ಕೈಂಕರ್ಯಗಳು ನೆರವೇರಲಿದ್ದು, ಏ. 11 ರಂದು ರುದ್ರ ಹೋಮದೊಂದಿಗೆ ಪೂಜಾದಿಗಳನ್ನು ಪೂರೈಸಿ, ಅಂದು ರಾತ್ರಿಯೇ ಪೂಂಪೂಹಾರ್‍ಗೆ ಛೇದ ಬಿಂಬವನ್ನು ಒಯ್ಯಲಾಗುವದು ಎಂದು ಮಹಿತಿ ನೀಡಿದರು. ಆ ಮೂಲಕ 2007ರಲ್ಲಿ ಅಗಸ್ತ್ಯೇಶ್ವರ ಪುನರ್ ಪ್ರತಿಷ್ಠಾಪನೆ ಸಂದರ್ಭ ಹಿಂದಿನ ಬಿಂಬವನ್ನು ಭೂಗತಗೊಳಿಸಿದ್ದ ತಪ್ಪನ್ನು ಸರಿಪಡಿಸಿ, ಕ್ಷೇತ್ರದ ಅಭಿವೃದ್ಧಿಯೊಂದಿಗೆ ನಾಡಿನ ಶ್ರೇಯೋಭಿವೃದ್ಧಿ ಮೂಲಕ ಲೋಕ ಹಿತಕ್ಕಾಗಿ ದೇವತಾ ಕಾರ್ಯ ಹಮ್ಮಿಕೊಂಡಿರುವದಾಗಿ ಅವರು ನೆನಪಿಸಿದರು.

ಈ ವೇಳೆ ಮಾತನಾಡಿದ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ತಂತ್ರಿಗಳು ಹಾಗೂ ದೈವಜ್ಞರ ನಿರ್ದೇಶನದಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುವದಾಗಿ ಸ್ಪಷ್ಟಪಡಿಸಿದರು. ಪ್ರಶ್ನೆ ವಿಮರ್ಶೆ ಸಂದರ್ಭ ಅರ್ಚಕ ಕುಟುಂಬದ ಟಿ.ಎಸ್. ನಾರಾಯ ಣಾಚಾರ್, ಪ್ರಶಾಂತ್ ಆಚಾರ್, ಪ್ರಮುಖರಾದ ಕೋಡಿ ಪೊನ್ನಪ್ಪ, ಕುದುಕುಳಿ ಭರತ್, ಮಣವಟ್ಟಿರ ದೊರೆ, ಮಾದೇಟಿರ ಬೆಳ್ಯಪ್ಪ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕ್ಷೇತ್ರ ವ್ಯವಸ್ಥಾಪನಾ ಸಮಿತಿಯ ಡಾ. ಸಣ್ಣುವಂಡ ಕಾವೇರಪ್ಪ, ರವಿ ಭಟ್, ಉದಿಯಂಡ ಸುಭಾಷ್, ಕೆದಂಬಾಡಿ ರಮೇಶ್, ಅಣ್ಣಯ್ಯ, ಮೀನಾಕ್ಷಿ ಇತರ ಪ್ರಮುಖರಾದ ಎಂ.ಬಿ. ದೇವಯ್ಯ, ಸೂರ್ತಲೆ ಸೋಮಣ್ಣ, ಅಧಿಕಾರಿ ಜಗದೀಶ್ ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಪೊಲೀಸ್ ಭದ್ರತೆಯೊಂದಿಗೆ ಇಲಾಖೆಯಿಂದಲೂ ಸಭೆಯ ಚಿತ್ರೀಕರಣ ನಡೆಯಿತು. ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ ಹಾಗೂ ಇತರ ಕುಟುಂಬಸ್ಥರು ಹಾಜರಿದ್ದರು.