ಮಡಿಕೇರಿ, ಫೆ. 8 : ಮನೆ ಹಾಗೂ ಬೆಳೆ ಹಾನಿ ಪರಿಹಾರವನ್ನು ಕೂಡಲೇ ತಲುಪಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂತ್ರಸ್ತರ ಪುನರ್‍ವಸತಿ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆ ಹಾಗೂ ಬೆಳೆ ಹಾನಿ ಸಂಬಂಧ ಅರ್ಹ ಸಂತ್ರಸ್ತರಿಗೆ ಪರಿಹಾರ ತಲಪಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಅರ್ಹರಿಗೆ ಕೂಡಲೇ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಈಗಾಗಲೇ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ತುರ್ತಾಗಿ ಮನೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದು, ಜೂನ್ ತಿಂಗಳ ಒಳಗಾಗಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕಾ ಗಿರುವದರಿಂದ ಅಧಿಕಾರಿಗಳು ಅತಿವೃಷ್ಟಿಯಿಂದಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡ ಮತ್ತು ಭಾಗಶಃ ಹಾನಿಯಾಗಿರುವ ಮನೆಗಳ ಪಟ್ಟಿಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿಕೊಡುವ ಸಲುವಾಗಿ ತುರ್ತಾಗಿ ಅಂತಿಮ ಪಟ್ಟಿಯನ್ನು ನೀಡಬೇಕಾಗಿ ಜಿಲ್ಲಾಧಿಕಾರಿಯವರು ಕಂದಾಯಾಧಿಕಾರಿಗಳಿಗೆ ತಿಳಿಸಿದರು.

ಮೊದಲನೇ ಹಂತದಲ್ಲಿ ಮೇ, 30ರ ಒಳಗಾಗಿ ಸಂಪೂರ್ಣ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪ್ರಥಮ ಹಂತದಲ್ಲಿ ಮನೆಗಳನ್ನು ಹಸ್ತಾಂತರಿಸಬೇಕಾಗಿರುವದರಿಂದ ಕಂದಾಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗುವಂತೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಅವರು ಮನೆ ಕಳೆದುಕೊಂಡವರ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಇವರುಗಳಿಂದ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳು ಹಾಗೂ ಪ್ರಗತಿಯ ಕುರಿತು ಸಭೆಯಲ್ಲಿ ಮಾಹಿತಿ ಪಡೆದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್, ಮಡಿಕೇರಿ ತಹಶೀಲ್ದಾರ್ ಕುಸುಮ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಹಾಗೂ ಇತರರು ಇದ್ದರು.