ಕೂಡಿಗೆ, ಫೆ. 8: ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಕಾಲೇಜಿನ ಬೃಂದಾವನ ಇಕೋ ಕ್ಲಬ್ ವತಿಯಿಂದ ವಿವಿಧ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯ ಕ್ರಮದ ಮುಖ್ಯ ಅತಿಥಿಗಳಾಗಿದ್ದ ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್ ಮಾತನಾಡಿ, ಪರೀಕ್ಷೆ ಸಮೀಪಿಸುತ್ತಿದ್ದು ವಿದ್ಯಾರ್ಥಿ ಗಳು ಈಗಿನಿಂದಲೇ ಪಠ್ಯಗಳನ್ನು ಅಭ್ಯಸಿಸುವತ್ತ ಹೆಚ್ಚು ಗಮನಹರಿಸ ಬೇಕು ಎಂದರು. ಗ್ರಾಮದ ದೇವಾ ಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರಿವಿದ್ದು ಪರೀಕ್ಷೆಗೆ ತಯಾರಿ ನಡೆಸಬೇಕಿದೆ ಎಂದರು. ಕಾಲೇಜಿನ ರಜತ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮಕ್ಕೆ ಶ್ರಮಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ರಾಗಿಣಿ, ಹೆಚ್.ಆರ್. ರಂಗನಾಥ್, ಮನು ಅವರನ್ನು ಗೌರವಿಸಲಾಯಿತು.

ಕಾಲೇಜಿನ ಬೃಂದಾವನ ಇಕೋ ಕ್ಲಬ್ ವತಿಯಿಂದ ನಡೆದ ವಿವಿಧ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಬಾರ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಬಿ. ಮಹೇಶ್, ಪ್ರಮುಖರಾದ ಜವರೇ ಗೌಡ, ಶ್ರೀಧರ್, ಲೋಕೇಶ್, ಹಿರಿಯ ಉಪನ್ಯಾಸಕ ರಾದ ಕೆ.ಕೆ. ಭವಾನಿ, ಹೆಚ್.ಆರ್. ಶಿವಕುಮಾರ್ ಇದ್ದರು.