ಮಡಿಕೇರಿ, ಫೆ. 8: ಎರಡು ತಾಲೂಕುಗಳ ರಚನೆ ಘೋಷಣೆಯ ನಿರೀಕ್ಷೆ, ಪ್ರವಾಸೋದ್ಯಮ ಹಾಗೂ ಕಾಫಿಗೆ ಉತ್ತೇಜನ; ಮಲೆನಾಡು ಪ್ರದೇಶಾಭಿವೃದ್ಧಿಗೆ ವಿಶೇಷ ಯೋಜನೆಗಳ ನಿರೀಕ್ಷೆಯಲ್ಲಿದ್ದ ಕೊಡಗಿನ ಜನತೆಯ ಆಕಾಂಕ್ಷೆಗೆ ರಾಜ್ಯ ಬಜೆಟ್‍ನಲ್ಲಿ ಅನುದಾನ ಲಭ್ಯವಾಗ ದಿದ್ದರೂ, ಮಡಿಕೇರಿಯ ಮೆಡಿಕಲ್ ಕಾಲೇಜಿಗೆ ಹೊಂದಿ ಕೊಂಡಂತೆ 450 ಹಾಸಿಗೆಗಳ ಬೃಹತ್ ಆಸ್ಪತ್ರೆಯ ಕೊಡುಗೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಜಿಲ್ಲೆಯ ಜನತೆಗೆ ಆರೋಗ್ಯ ಕ್ಷೇತ್ರಕ್ಕೆ ಉತ್ತಮ್ಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.ಈ ಯೋಜನೆಗಾಗಿ ಇಂದು ಮಂಡಿಸಿದ ಬಜೆಟನ್ನು ಮುಖ ್ಯಮಂತ್ರಿಗಳು 100 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಇದರೊಂದಿಗೆ ಕ್ರೀಡೆಗೂ, ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿದ್ದು, ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ಅನುದಾನ ಲಭಿಸಿದೆ.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮಂಡಿಸಿರುವ ರಾಜ್ಯ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿ ದಂತೆ ಹಲವು ವಿಚಾರಗಳು-ಯೋಜನೆಗಳು ಪ್ರಕಟಗೊಂಡಿವೆ. ಕೆಲವು ನಿರೀಕ್ಷೆಗಳು ಹುಸಿಯಾಗಿದ್ದರೆ, ಇನ್ನು ಹಲವು ಹೊಸ ಯೋಜನೆಗಲು ಘೋಷಣೆಯಾಗಿವೆ. ಮುಖ್ಯವಾಗಿ ಪೊನ್ನಂಪೇಟೆ ಹಾಗೂ ಕುಶಾಲನಗರ ಪ್ರತ್ಯೇಕ ತಾಲೂಕು ರಚನೆ ಕುರಿತಾಗಿ ಈ ಹಿಂದೆ ಜಿಲ್ಲೆಯಲ್ಲಿ ಪಕ್ಷಾತೀತ ಹೋರಾಟ ನಡೆದಿತ್ತಾದರೂ, ಈ ಬಗ್ಗೆ ಯಾವದೇ ಪ್ರಸ್ತಾಪವಿಲ್ಲದಿರುವದು ಕಂಡುಬಂದಿದೆ. ಪ್ರಕೃತಿ ವಿಕೋಪ ದಿಂದ ಕೊಡಗಿನಲ್ಲಿ ಮನೆ ಕಳೆದು ಕೊಂಡ 840 ನಿರಾಶ್ರಿತರಿಗೆ ಸರಕಾರದ ವತಿಯಿಂದ

(ಮೊದಲ ಪುಟದಿಂದ) ಮನೆ ನಿರ್ಮಿಸಿ ಕೊಡುವ ಕಾರ್ಯ ಭರದಿಂದ ಸಾಗಿದೆ ಎಂದು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೆ ಕೊಡಗಿನ ಸಂಕಷ್ಟಕ್ಕೆ ಮಿಡಿದು ಸ್ಪಂದಿಸಿದ ವಿವಿಧ ರಕ್ಷಣಾ ಪಡೆಗಳ ಸಿಬ್ಬಂದಿ, ಸ್ವಯಂಸೇವಕರು ಸಾರ್ವಜನಿಕರ ಮಾನವೀಯ ಕಾಳಜಿಯನ್ನು ಸ್ಮರಿಸುವದಾಗಿ ಅವರು ಸ್ಮರಿಸಿದ್ದಾರೆ.

ಯೋಜನೆಗಳು

* ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣಕ್ಕೆ ರೂ. 100 ಕೋಟಿಗಳ ಅನುದಾನ.

* ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಮರು ಸರ್ವೆ ಕಾರ್ಯ.

* ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾವಸತಿ ನಿಲಯ ನಿರ್ಮಾಣಕ್ಕಾಗಿ ರೂ. 12.5 ಕೋಟಿ.

* ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ ರಾಜ್ಯದ 10 ಸ್ಥಳಗಳಲ್ಲಿ ಸಾಹಸ ಕ್ರೀಡೋತ್ಸವ ಆಯೋಜನೆಗೆ ರೂ. 2 ಕೋಟಿ.

* ಕೊಡಗು - ಪುನರ್‍ನಿರ್ಮಾಣ, ಪುನರ್‍ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಕಾರ್ಯಚಟುವಟಿಕೆಗಳಿಗೆ ರೂ. 2 ಕೋಟಿ ಅನುದಾನ.

* ತುಳು, ಕೊಡವ ಮತ್ತು ಕೊಂಕಣಿ ಭಾಷಾ ಚಲನ ಚಿತ್ರಗಳನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ ಹಾಗೂ ರೂ. 1 ಕೋಟಿ ಅನುದಾನ.

* ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡಲು ಜನಾಪದ ಜಾತ್ರೆ - ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು ರೂ. 2 ಕೋಟಿ ಅನುದಾನ.

ಬಾಳುಗೋಡು ಹಾಕಿ ಕ್ರೀಡಾಂಗಣಕ್ಕೆ ರೂ. 5 ಕೋಟಿ

ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿರುವ ವೀರಾಜಪೇಟೆ ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿರುವ ಹಾಕಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ರೂ. 5 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಕರ್ನಾಟಕದಿಂದ ಹಾಕಿ ಕ್ರೀಡೆಯಲ್ಲಿ ಪ್ರತಿನಿಧಿಸಲು ಕೊಡವ ಜನಾಂಗದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದು, ಜನಾಂಗದ ಕೊಡುಗೆಯನ್ನು ಗೌರವಿಸಿ ಈ ಅನುದಾನ ನೀಡಲಾಗುತ್ತಿದೆ ಎಂದಿದ್ದಾರೆ. ಹಾಕಿ ಕ್ರೀಡಾಂಗಣಕ್ಕೆ ಬಜೆಟ್‍ನಲ್ಲಿ ಅನುದಾನ ಒದಗಿಸುವಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ, ಮಾಜಿ ಸಂಸದ ಅಡಗೂರು ವಿಶ್ವನಾಥ್ ಅವರ ಪ್ರಯತ್ನವನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೊಡವ ಸಮಾಜದ ಅಭಿವೃದ್ಧಿಗೆ ರೂ. 10 ಕೋಟಿ

ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರೂ. 10 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಿರುವದು ವಿಶೇಷವಾಗಿದೆ.

- ಬಿ.ಜಿ. ರವಿಕುಮಾರ್.