ಸಿದ್ದಾಪುರ, ಫೆ. 8 :ಅತಿವೃಷ್ಟಿ ಅನಾವೃಷ್ಟಿ, ಕಾರ್ಮಿಕ ಸಮಸ್ಯೆ ಬೆಲೆ ಬೆಳೆ ಕುಸಿತದೊಂದಿಗೆ ಮೊದಲೇ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಮಳೆಯಲ್ಲಿ ತುಂತುರು ಹನಿ ಬೀಳುವದು ಸಹಜ. ಆದರೆ ಕೆಲವೆಡೆ ಜೋರಾಗಿ ಮಳೆ ಸುರಿದಿದ್ದು, ಗಿಡದಲ್ಲಿರುವ ಕಾಫಿ ಉದುರುವಂತಾಗಿದ್ದರೆ, ಕುಯಿಲು ಮಾಡಿ ಒಣಗಲು ಹಾಕಿದ ಕಾಫಿ ಕೊಚ್ಚಿ ಹೋಗಿರುವ ಘಟನೆ ಸಂಭವಿಸಿದೆ.

ಇಲ್ಲಿಗೆ ಸಮೀಪದ ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ನಿನ್ನೆ ಜೋರಾಗಿ ಮಳೆ ಸುರಿದಿದೆ. ವಾಲ್ನೂರುವಿಗೆ 2 ಇಂಚುಗಳಷ್ಟು ಮಳೆಯಾಗಿದ್ದರೆ, ತ್ಯಾಗತ್ತೂರುವಿನಲ್ಲಿ 3 ಇಂಚು ಮಳೆ ಸುರಿದಿದೆ. ಈ ಭಾರಿ ಮಳೆಗೆ ಇಲ್ಲಿನ ಮುಂಡ್ರುಮನೆ ಕುಟುಂಬಸ್ಥರು ಹಾಗೂ ಭಗವತಿ ದೇವಾಲಯಕ್ಕೆ ಸೇರಿದ್ದ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿ ಕಾವೇರಿ ನದಿ ಪಾಲಾಗಿದೆ. ಮುಂಡ್ರುಮನೆ ಲಿಖಿತ್ ಚಕ್ರವರ್ತಿ ಅವರಿಗೆ ಸೇರಿದ 45 ಚೀಲ, ಶಿವಕುಮಾರ್ ಅವರ 60 ಚೀಲ, ಭಗವತಿ ದೇವಾಲಯದ 40 ಚೀಲ, ಗಿರೀಶ್ ಅವರ 20 ಚೀಲ ಸುದೇಶ್ ಅವರ 25 ಚೀಲ, ಮಹೇಶ್ ಅವರ 20 ಚೀಲ, ಹಾಲಪ್ಪ ಅವರ 15 ಚೀಲಗಳಷ್ಟು ಕಾಫಿ ಮಳೆ ನೀರಿನಲ್ಲಿ ಕೊಚ್ಚಿಹೋಗಿ ಕಾವೇರಿ ನದಿ ಸೇರಿದೆ. ಮೊದಲೇ ಕಂಗಾಲಾಗಿದ್ದ ಬೆಳೆಗಾರರು ಸುಧಾರಿಸಕೊಳ್ಳುವಷ್ಟರಲ್ಲಿ ಮಳೆಯ ಈ ಹೊಡೆತ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

- ಅಂಚೆಮನೆ ಸುಧಿ