ಮಡಿಕೇರಿ, ಫೆ. 9: ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆಯ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿ, ಕೃಷಿ ಜಮೀನನ್ನು ಕೃಷಿಯೇತರ ವಾಣಿಜ್ಯ ಉದ್ದೇಶಗಳಿಗೆ ಪರಿವರ್ತನೆ ಗೊಳಿಸದಂತೆ, ಈ ಹಿಂದೆ ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಮರು ಪರಿಶೀಲನೆ ನಡೆಯುತ್ತಿದೆ. ಇತ್ತೀಚೆಗೆ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಎದುರಾಗಿತ್ತು. ವಿಪರೀತ ಮಳೆಯ ನಡುವೆ ಅಲ್ಲಲ್ಲಿ ಭೂಕುಸಿತದೊಂದಿಗೆ ಜಲಸ್ಫೋಟ ಸಂಭವಿಸಿತ್ತು. ಈ ವೇಳೆ ಅನೇಕ ಮನೆ ಮಠಗಳೊಂದಿಗೆ ಸಾರ್ವಜನಿಕ ರಸ್ತೆಗಳು ಕೂಡ ಹಾನಿಗೊಂಡು, ಬಹುತೇಕ ಜನಜೀವನ ಅಸ್ತವ್ಯಸ್ತ ಗೊಂಡಿದ್ದಲ್ಲದೆ ಸಾವು - ನೋವು ಉಂಟಾಗಿತ್ತು.
ಆ ಬೆನ್ನಲ್ಲೇ ಕೊಡಗಿನಲ್ಲಿ ಎದುರಾಗಿದ್ದ ಈ ಪ್ರಾಕೃತಿಕ ದುರಂತ ಸಂಬಂಧ, ಭಾರತೀಯ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆಯಿಂದ ಸರಕಾರಕ್ಕೆ ಸಮಗ್ರ ವರದಿ ನೀಡಲು ಆದೇಶಿಸಲಾಗಿತ್ತು. ಆ ವೇಳೆ ಕೊಡಗಿನಲ್ಲಿ ಅಧ್ಯಯನ ನಡೆಸಿದ ಭೂಗರ್ಭ ಇಲಾಖೆಯ ಅಧಿಕಾರಿಗಳು, ಪ್ರಾಕೃತಿಕ ವಿಕೋಪದಿಂದ ಕೊಡಗಿನ ಬಹುತೇಕ ಅನಾಹುತಗಳಿಗೆ ಮಾನವ ನಿರ್ಮಿತ ಕಾರ್ಯ ಯೋಜನೆಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು. ಈ ವರದಿಯ ಬೆನ್ನಲ್ಲೇ ರಾಜ್ಯ ಸರಕಾರದಿಂದ ಕೃಷಿ ಭೂಮಿಯನ್ನು ಜಿಲ್ಲೆಯಲ್ಲಿ ಕೃಷಿಯೇತರ ಉದ್ದೇಶಗಳಿಗೆ ಭೂಪರಿವರ್ತನೆ ಮಾಡದಂತೆ ತಾತ್ಕಾಲಿಕ ಆದೇಶ ಹೊರಡಿಸಿತ್ತು.
ಪರಿಣಾಮ ಕೊಡಗಿನ ಬಹು ಮಂದಿಗೆ ತಮ್ಮ ಸ್ವಂತ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಲು ಕೂಡ ತೊಂದರೆ ಉಂಟಾಗಿದ್ದು, ಅಂತಹ ಯಾವದೇ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಸೇರಿದಂತೆ ನಗರಸಭೆ, ಪಟ್ಟಣ ಪಂಚಾಯಿತಿಗಳು ತಡೆ ಹಿಡಿದಿದ್ದು, ಭೂಗರ್ಭ ಇಲಾಖೆಯಿಂದ ದೃಢೀಕರಣಕ್ಕೆ ಸೂಚಿಸಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಕಂಗೆಟ್ಟಿರುವ ಅನೇಕರು ನೇರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಬಳಿ ದೂರು ಸಲ್ಲಿಸಿದ್ದರು.
ಇಂತಹ ದೂರುಗಳನ್ನು ಗಮನದಲ್ಲಿ ಇರಿಸಿಕೊಂಡಿರುವ ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದಲ್ಲದೆ, ಕಂದಾಯ ಸಚಿವರು ತಮ್ಮ ಸಂಪುಟ ಉಪ ಸಮಿತಿ ಸಭೆಯಲ್ಲಿ ಸೂಕ್ತ ಕ್ರಮ ವಹಿಸುವಂತೆ ಸಲಹೆ ನೀಡಿದ್ದರು. ಆ ಮೇರೆಗೆ, ಕಳೆದ ಇತ್ತೀಚೆಗೆ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಸಂಬಂಧಿಸಿದ ಇಲಾಖೆ ಕಾರ್ಯದರ್ಶಿ ಹಾಗೂ ಅಧಿಕಾರಿ ವರ್ಗದ ಸಭೆಯಲ್ಲಿ ನಿರ್ದಿಷ್ಟ ವಿಷಯದ ಸಂಬಂಧ ಸಮಾಲೋಚನೆ ನಡೆಸಲಾಯಿತು.
ಅಲ್ಲದೆ, ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಿದಲ್ಲಿ ಆಗುವ ಸಾಧಕ - ಬಾಧಕಗಳ ಬಗ್ಗೆ ಪರಿಶೀಲಿಸಿ ತುರ್ತಾಗಿ ಮೂರು ದಿನಗಳಲ್ಲಿ ಸಮಗ್ರ ವರದಿಯನ್ನು ನೀಡಬೇಕೆಂದು, ಕಂದಾಯ ಇಲಾಖೆಯ ಭೂ ಮಂಜೂರಾತಿ ಕಾರ್ಯದರ್ಶಿ ಸಿ. ವಿಮಲಮ್ಮ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ಈ ಹೊತ್ತಿಗೆ ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ರಜೆಯಲ್ಲಿ ತೆರಳಿದ್ದರು. ಹೀಗಾಗಿ ಪ್ರಬಾರ ಅಧಿಕಾರಿಗಳು ಸಕಾಲದಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ ತುರ್ತು ವರದಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಬಳಿಕ ಆಗಮಿಸಿರುವ ನೂತನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ರಾಜ್ಯದ ಈ ಆದೇಶದ ಕುರಿತು ಅಧ್ಯಯನ ನಡೆಸುವದ ರೊಂದಿಗೆ, ಭೂ ಪರಿರ್ವನೆಯಿಂದ ಕೊಡಗಿನಲ್ಲಿ ಎದುರಾಗಬಹುದಾದ ಸಾಧಕ ಮತ್ತು ಬಾಧಕಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಲ್ಲದೆ ಆದಷ್ಟು ಬೇಗನೆ ಎಲ್ಲವನ್ನು ಗಮನಿಸಿ, ಸರಕಾರಕ್ಕೆ ಸೂಕ್ತ ಮಾಹಿತಿ ರವಾನಿಸಲಾಗುವದು ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಈಗಷ್ಟೇ ತಾವು ಕಡತವನ್ನು ಪರಿಶೀಲನೆ ನಡೆಸಿದ್ದು, ಪೂರ್ಣ ವಿವರ ಪಡೆಯಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.