ಪೊನ್ನಂಪೇಟೆ, ಫೆ. 9: ಕಳೆದ ಒಂದು ದಶಕಕ್ಕೂ ಹಿಂದಿನಿಂದಲೂ ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕುಗಳ ರಚನೆಗಾಗಿ ಒತ್ತಾಯಿಸುತ್ತಾ ಹೋರಾಟಗಳು ನಡೆದರೂ ಪ್ರತ್ಯೇಕ ತಾಲೂಕು ರಚನೆಗೊಂಡಿಲ್ಲ. ಈ ಬಾರಿಯ ಮುಂಗಡ ಪತ್ರದಲ್ಲೂ ಕೂಡ ಕೊಡಗಿನ ಜನತೆ ನಿರಾಶೆಗೊಂಡಿದ್ದಾರೆ.

2006ರಲ್ಲಿ ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಹೋರಾಟ ಸಮಿತಿ ರೂಪುಗೊಂಡು ಅಂದಿನ ಕಂದಾಯ ಸಚಿವರಾಗಿದ್ದ ಎಂ.ಪಿ. ಪ್ರಕಾಶ್‍ರವರನ್ನು ವಿಧಾನ ಪರಿಷತ್ ಸದಸ್ಯರಾಗಿದ್ದ ಅರುಣ್ ಮಾಚಯ್ಯ, ಸಮಿತಿಯ ಸಂಚಾಲಕರಾದ ಪುಚ್ಚಿಮಾಡ ಹರೀಶ್ ಅವರ ಮುಂದಾಳತ್ವದಲ್ಲಿ ನಿಯೋಗ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ಎಂ.ಪಿ ಪ್ರಕಾಶ್ ಅವರ ಅಭಿಪ್ರಾಯದಂತೆ ಮೊದಲು ಪೊನ್ನಂಪೇಟೆ ನ್ಯಾಯಾಲಯವನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಅರ್ಪಿಸಿ, ನ್ಯಾಯಾಲಯ ಆರಂಭಗೊಂಡರೆ ಪ್ರತ್ಯೇಕ ತಾಲೂಕು ಬೇಡಿಕೆಗೆ ಪುಷ್ಟಿ ನೀಡಿದಂತಾಗುತ್ತದೆ ಎಂಬ ಅವರ ಅಭಿಪ್ರಾಯದಂತೆ ವಕೀಲರಾದ ಕೆ.ಕೆ. ಬೀಮಯ್ಯ ಅವರು ನ್ಯಾಯಾಲಯ ಸ್ಥಾಪನೆಗೆ ಒತ್ತಾಯಿಸಿ ಸರ್ಕಾರದೊಂದಿಗೆ ವ್ಯವಹರಿಸಿದ ನಂತರ ಪೊನ್ನಂಪೇಟೆಯಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯ ಆರಂಭಿಸಲು ಸರ್ಕಾರ ಕ್ರಮಕೈಗೊಂಡಿತು.

2007ರಲ್ಲಿ ಮತ್ತೆ ಪುನಃ ಕಂದಾಯ ಸಚಿವರಾಗಿದ್ದ ಧರ್ಮಸಿಂಗ್ ಅವರನ್ನು ಕೂಡ ಭೇಟಿಯಾಗಿ ಹೋರಾಟ ಸಮಿತಿ ಮನವಿಯನ್ನು ಸಲ್ಲಿಸಿತು. 2009ರಲ್ಲಿ ತಾಲೂಕು ಪುನರ್ ರಚನಾ ಸಮಿತಿಯೂ ಸಲ್ಲಿಸಿದ ವರದಿಯಲ್ಲಿ 43 ಹೊಸ ತಾಲೂಕುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನಿಂದ ಬೇರ್ಪಟ್ಟರೆ ಸಣ್ಣದಾಗುವದೆಂದು ಸಮಿತಿ ಪೊನ್ನಂಪೇಟೆ ತಾಲೂಕನ್ನು ಕೈಬಿಟ್ಟಿತ್ತು. 2010 ರಲ್ಲಿ ಬಂದ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ 43 ತಾಲೂಕಿನೊಂದಿಗೆ ಇತರೆ 7 ತಾಲೂಕನ್ನು ಸೇರಿಸಿ ಒಟ್ಟು 50 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದರು.

2017-18ನೇ ಸಾಲಿನ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನದೆ ಆದ ಕಾರಣಗಳಿಂದ ಬದಲಾವಣೆಗಳೊಂದಿಗೆ 9 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಿ ಒಟ್ಟು 50 ಹೊಸ ತಾಲೂಕುಗಳನ್ನು ರಚಿಸಿ ಆದೇಶ ಹೊರಡಿಸಿದರು.

ಕೊಡಗಿನಷ್ಟೇ ವಿಸ್ತೀರ್ಣವಿರುವ ಉಡುಪಿ ಜಿಲ್ಲೆಗೆ ನಾಲ್ಕು ಹೊಸ ತಾಲೂಕುಗಳನ್ನು, ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರ ಮತ್ತು ಉತ್ತರಕನ್ನಡ ಜಿಲ್ಲೆಯ ದಾಂಡೇಲಿಗಳಲ್ಲಿ ಕೆಲವೇ ಗ್ರಾಮಗಳನ್ನು ಒಳಗೊಂಡ ಚಿಕ್ಕ ತಾಲೂಕುಗಳನ್ನು ಪರಿಗಣಿಸಿದೆ. ಪೊನ್ನಂಪೇಟೆ ಪ್ರತ್ಯೇಕ ತಾಲೂಕು ರಚನೆಗೊಂಡರೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಇದ್ದರೂ ಇದುವರೆಗೂ ಕೂಡ ಯಾವೊಂದು ಸರ್ಕಾರವೂ ಪರಿಗಣಿಸದಿರುವದು ಈ ಭಾಗದ ಜನರಲ್ಲಿ ಬೇಸರ ಮೂಡಿಸಿದೆ. ಪ್ರತ್ಯೇಕ ತಾಲೂಕು ರಚನೆಗಾಗಿ 2006 ರಿಂದಲೂ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಹೋರಾಟ ಸಮಿತಿ ಬರುತ್ತಿದ್ದು 2017ರಲ್ಲಿ 71 ದಿನ ದರಣಿ ಮುಷ್ಕರವನ್ನು ಕೂಡ ಕೈಗೊಳ್ಳಲಾಗಿತ್ತು.

9.1.2018 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಗೆ ಸಾಧನಾ ಸಮಾವೇಶಕ್ಕೆ ಆಗಮಿಸಿದ ಸಂದರ್ಭ ಸಮಾವೇಶದಲ್ಲಿ ಭಹಿರಂಗವಾಗಿ ಕೊಡಗಿನ ಎರಡು ಪ್ರತ್ಯೇಕ ತಾಲೂಕು ರಚಿಸುವ ಬಗ್ಗೆ ಭರವಸೆ ನೀಡಿದರಿಂದ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿತ್ತು. 2017ರ ನವೆಂಬರ್‍ನಲ್ಲಿ ವೀರಾಜಪೇಟೆಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ತಾಲೂಕು ಘೋಷಿಸುವದಾಗಿ ಬಹಿರಂಗ ಸಭೆಯಲ್ಲೇ ಹೇಳಿದ್ದರು. 2017ರ ಡಿಸೆಂಬರ್‍ನಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಕೂಡ ಪ್ರತ್ಯೇಕ ತಾಲೂಕು ರಚಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು.

2017ರ ನವೆಂಬರ್‍ನಲ್ಲಿ ನಡೆದ ಕಲಾಪದಲ್ಲಿ ಪ್ರಶ್ನೋತರ ವೇಳೆ ಶಾಸಕ ಕೆ.ಜಿ. ಬೋಪಯ್ಯರವರ ಪ್ರಶ್ನೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸದನದಲ್ಲಿ ಸರ್ಕಾರದಿಂದ ಪರಿಶೀಲಿಸುವ ಉತ್ತರವನ್ನು ಕೂಡ ನೀಡಿದ್ದರು. ಕಳೆದ ಒಂದು ವಾರದ ಹಿಂದೆ ಪ್ರತ್ಯೇಕ ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಪದ್ಮಿನಿ ಪೊನ್ನಪ್ಪ ಮುಂದಾಳತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಅರ್ಪಿಸಿ ಮುಂಗಡ ಪತ್ರದಲ್ಲೆ ಘೋಷಿಸುವಂತೆ ಕೋರಿಕೊಳ್ಳಲಾಯಿತು. ಆದರೆ ರಾಜ್ಯ ಸರ್ಕಾರ ಕೊಡಗಿನ ಎರಡು ಪ್ರತ್ಯೇಕ ತಾಲೂಕು ರಚನೆ ಬಗ್ಗೆ ಯಾವದೇ ಕ್ರಮಕೈಗೊಂಡಿಲ್ಲ.

ಪೊನ್ನಂಪೇಟೆಯ ವೈಶಿಷ್ಟ್ಯ

4 ಹೋಬಳಿಗಳು, 49 ಗ್ರಾಮಗಳು, 29 ಗ್ರಾಮ ಪಂಚಾಯಿತಿಗಳು, 1025 ಚ.ಕಿ.ಮೀ ವಿಸ್ತೀರ್ಣ 1.25 ಲಕ್ಷ ಅಂದಾಜು ಜನ ಸಂಖ್ಯೆ, ಸಬ್ ರಿಜಿಸ್ಟರ್ ಕಚೇರಿ, ಖಜಾನೆ, ತಾಲೂಕು ಪಂಚಾಯಿತಿ, ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ,ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಇಲಾಖಾ ಕಚೇರಿಗಳು ಪೊನ್ನಂಪೇಟೆಯಲ್ಲಿ ಸ್ಥಾಪನೆಗೊಂಡಿವೆ. ಸರ್ಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳು ಬ್ಯಾಂಕ್‍ಗಳು 35ಕ್ಕೂ ಹೆಚ್ಚು ಸರಕಾರಿ ಕಚೇರಿಗಳು ಪೊನ್ನಂಪೇಟೆ ಕೇಂದ್ರದಲ್ಲಿವೆ.

ಪೊನ್ನಂಪೇಟೆ ಪ್ರತ್ಯೇಕ ತಾಲೂಕು ರಚನೆಗೊಂಡರೆ ತಾಲೂಕು ಕಚೇರಿ ಹಾಗೂ ಭೂಮಾಪನ ಕಚೇರಿ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಮಾತ್ರ ಆರಂಭಿಸಬೇಕಾಗುತ್ತದೆ. ಈ ಎಲ್ಲಾ ಕಚೇರಿಗಳಿಗೆ ಬೇಕಾದ ಕಟ್ಟಡ ಸೌಲಭ್ಯ ಪೊನ್ನಂಪೇಟೆಯಲ್ಲಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಕಿಗ್ಗಟ್‍ನಾಡು ತಾಲೂಕಾಗಿ ಪೊನ್ನಂಪೇಟೆ ಗುರುತಿಸಲಾಗಿತ್ತು. ಇಡೀ ರಾಜ್ಯದಲ್ಲೇ ಹೋಬಳಿ ಕೇಂದ್ರದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಇರುವದು ಪೊನ್ನಂಪೇಟೆಯಲ್ಲಿ ಮಾತ್ರ. ವಿಶ್ವ ಭೂಪಟದಲ್ಲಿ ಇಂದಿಗೂ ಪೊನ್ನಂಪೇಟೆಯನ್ನು ಕಾಣಬಹುದಾಗಿದೆ. ಭತ್ತಕ್ಕೆ ತಗಲುವ ಬೆಂಕಿ ರೋಗವನ್ನು ಸಂಶೋಧಿಸುವ ಕೇಂದ್ರವಿರುವದು ಪೊನ್ನಂಪೇಟೆಯಲ್ಲಿ ಮಾತ್ರ. ಹೀಗೆ ಪ್ರತ್ಯೇಕ ತಾಲೂಕಿಗೆ ಬೇಕಾದ ಎಲ್ಲಾ ಸವಲತ್ತುಗಳು ಪೊನ್ನಂಪೇಟೆಯಲ್ಲಿದ್ದರೂ ಸರ್ಕಾರ ಈ ಬಗ್ಗೆ ಪರಿಗಣಿಸುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಈ ಭಾಗದ ಜನರಿಗೆ ಇನ್ನೂ ಉತ್ತರ ದೊರಕಿಲ್ಲ. ವೀರಾಜಪೇಟೆಯಿಂದ 21 ಕಿ.ಮೀ ದೂರದಲ್ಲಿರುವ ಪೊನ್ನಂಪೇಟೆಯ ವಿಸ್ತೀರ್ಣ 1025 ಚ.ಕಿ.ಮೀ (ಅರಣ್ಯ ಪ್ರದೇಶ ಸೇರಿ) ಖಾಲಿ ಇರುವ ಹಲವಾರು ತಾಲೂಕುಗಳು ಮತ್ತು ಹೊಸ ತಾಲೂಕುಗಳ ವಿಸ್ತೀರ್ಣ 300 ರಿಂದ 500 ಚ.ಕಿ.ಮೀ. ಹೀಗಿದ್ದರೂ ಪೊನ್ನಂಪೇಟೆಯನ್ನು ಪ್ರತ್ಯೇಕ ತಾಲೂಕು ಘೋಷಿಸುವಲ್ಲಿ ಇದುವರೆಗೆ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳ ಮೀನ ಮೇಷ ಎಣಿಸುತ್ತಿರುವದು ಯಾಕೆ ಎಂಬುವದೇ ಯಕ್ಷ ಪ್ರಶ್ನೆಯಾಗಿದೆ.

ವಿಶೇಷ ವರದಿ: ಶ್ರೀಧರ್ ನೆಲ್ಲಿತ್ತಾಯ