ಮಡಿಕೇರಿ, ಫೆ. 9: ಬಾಲ್ಯ ವಿವಾಹ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವದು ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಕರೆ ನೀಡಿದರು.ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ನಿಯಮಾವಳಿಗಳ ಅನುಷ್ಠಾನದ ಕುರಿತು ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಬಾಲ್ಯ ವಿವಾಹವನ್ನು ತಡೆಗಟ್ಟಿ, ಮಕ್ಕಳ ಬಾಳನ್ನು ಬೆಳಗಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ನೀಡಿದರು.
ಪೋಕ್ಸೊ ಕಾಯ್ದೆಯಡಿ 29 ಪ್ರಕರಣಗಳು ದಾಖಲಾಗಿದ್ದವು, ಇವುಗಳಲ್ಲಿ 25 ಪ್ರಕರಣ ಇತ್ಯರ್ಥಪ ಡಿಸಲಾಗಿದೆ. ನಾಲ್ಕು ಪ್ರಕರಣಗಳು ಬಾಕಿ ಇವೆ. ನೊಂದವರಿಗೆ ನ್ಯಾಯ ಒದಗಿಸುವದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನ್ಯಾಯಾಧೀಶರು ತಿಳಿಸಿದರು. ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಡಿ. ಪವನೇಶ್ (ಮೊದಲ ಪುಟದಿಂದ) ಮಾತನಾಡಿ, ಬಾಲ್ಯ ವಿವಾಹದಿಂದ ಹಲವು ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಲೆಕ್ಕಿಸದೆ, ಎಲ್ಲಾ ಮಕ್ಕಳಿಗೆ ಆರೈಕೆ ಮತ್ತು ಸುರಕ್ಷೆ ಮಾಡುವದು ಅತ್ಯಗತ್ಯ. ಪ್ರತಿ ಮಕ್ಕಳಿಗೂ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ ಎಂದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ನಿಯಮಾವಳಿ 2008 ರ ಅನುಷ್ಠಾನ ಬಗ್ಗೆ ಮಾಹಿತಿ ನೀಡಿದ ನ್ಯಾಯಾಧೀಶರು ಬಾಲ್ಯ ವಿವಾಹ ಅಪರಾಧಕ್ಕೆ 1 ರಿಂದ 2 ವರ್ಷದ ವರೆಗೆ ಜೈಲುವಾಸ ಮತ್ತು ರೂ. 1 ಲಕ್ಷ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಪೊಕ್ಸೊ ಕಾಯ್ದೆಯಡಿ ಇದುವರೆಗೆ 204 ಪ್ರಕರಣಗಳು ದಾಖಲಾಗಿದ್ದು, 22 ಪ್ರಕರಣಗಳಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು. ವಕೀಲೆ ದಿವ್ಯ ಕೂಡ ಮಾತನಾಡಿದರು. ಎರಡನೇ ಅಪರ ಸೆಷನ್ ನ್ಯಾಯಾಧೀಶೆ ಬಿ.ಜಿ. ರಮಾ, ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಜೆಎಂಎಫ್‍ಸಿ ನ್ಯಾಯಾಧೀಶರುಗಳು ಇತರರು ಇದ್ದರು.