ಮಡಿಕೇರಿ, ಫೆ. 9: ಕೊಡಗನ್ನೊ ಳಗೊಂಡಂತೆ ಕಣ್ಣೂರು, ಮೈಸೂರು, ಬೇಕಲ್ ವ್ಯಾಪ್ತಿಯ ಪ್ರವಾಸೀ ತಾಣಗಳ ಅಬಿವೃದ್ಧಿಗಾಗಿ ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ಮಲಬಾರ್ ಪ್ರವಾಸೋದ್ಯಮ ವಲಯದ ಮೂಲಕ ವಿವಿಧ ಯೋಜನೆ ರೂಪಿಸಲಾಗುತ್ತಿದ್ದು, ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕೊಡಗಿಗೆ ಪ್ರತ್ಯೇಕ ಮಳಿಗೆ ಕಲ್ಪಿಸುವದಾಗಿ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ವಿ. ತುಳಸೀದಾಸ್ ಹೇಳಿದ್ದಾರೆ.ಕಣ್ಣೂರಿನಲ್ಲಿ ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿತ ಮಲಬಾರ್ ಪ್ರವಾಸೋದ್ಯಮ ಸಂಬಂಧಿತ ವಿಚಾರಸಂಕಿರಣದಲ್ಲಿ ಮಾತನಾಡಿದ ತುಳಸೀದಾಸ್, ಕಣ್ಣೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದಾಗಿನಿಂದ ಕೊಡಗೂ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗಳು ಚೇತರಿಕೆಯಾಗಲಿವೆ. ಮಲಬಾರ್ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಣ್ಣ ಬಜೆಟ್ನ ಕೊಠಡಿಗಳಿಗಿಂತ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸುಸಜ್ಜಿತ ಕೊಠಡಿಗಳು ಅಗತ್ಯವಿದ್ದು ಈ ನಿಟ್ಟಿನಲ್ಲಿ ಹೋಟೇಲ್, ಲಾಡ್ಜ್, ರೆಸಾರ್ಟ್ ಮಾಲೀಕರು ಚಿಂತನೆ ಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಕಣ್ಣೂರು ವಿಮಾನ ನಿಲ್ದಾಣದಲ್ಲಿ ಏರ್ಪೆÇೀರ್ಟ್ ವಿಲೇಜ್ ನಿರ್ಮಾಣದ ಮೂಲಕ ಕೊಡಗೂ ಸೇರಿದಂತೆ ಮಲಬಾರ್ ವ್ಯಾಪ್ತಿಯ ಪ್ರವಾಸೀ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಯೋಜನೆ ಜಾರಿಗೊಳ್ಳಲಿದೆ. ಅಂತೆಯೇ, ಕಲಾವಿದರಿಗೂ ಆಯಾ ಸಂಸ್ಕøತಿ ಬಿಂಬಿಸುವ ಚಿತ್ರಕಲೆಗೆ ಸೂಕ್ತ ಅವಕಾಶವನ್ನು ವಿಮಾನ ನಿಲ್ದಾಣದಲ್ಲಿ ಮಾಡಿಕೊಡಲಾಗುತ್ತದೆ ಎಂದು ಘೋಷಿಸಿದರು.
ಕೇರಳ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ಕಣ್ಣೂರು ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಚಟುವಟಿಕೆಗಳಿಗಾಗಿ 5 ಸಾವಿರ ಎಕರೆ ಭೂಮಿಯನ್ನು ನೀಡುತ್ತಿದ್ದು, ಇದರ ಸದುಪಯೋಗ ವನ್ನು ಕೇರಳ ಮತ್ತು ಕರ್ನಾಟಕದ ಉದ್ಯಮಿಗಳು ಬಳಸಿಕೊಳ್ಳುವಂತೆಯೂ ತುಳಸೀದಾಸ್ ಮನವಿ ಮಾಡಿದರು.
ಕೊಡಗು ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು, ಅಸೋಸಿಯೇಷನ್ ವತಿಯಿಂದ ಮಲಬಾರ್ ಪ್ರವಾಸೀ ವಲಯ ಯೋಜನೆಗೆ ಅಗತ್ಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.
(ಮೊದಲ ಪುಟದಿಂದ)
ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕದಿಂದ ಕೇರಳಕ್ಕೆ ಬರುವ ಟೆಂಪೆÇೀ ಟ್ರಾವಲರ್ ಸೇರಿದಂತೆ ಹಲವು ವಿಧದ ಬಾಡಿಗೆ ವಾಹನಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ದುಬಾರಿಯಾಗಿದ್ದು ಹೀಗಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೂ ತೊಡಕಾಗುವ ಸಾಧ್ಯತೆ ಇದೆ ಎಂದರು. ಕಣ್ಣೂರು ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳ ಪ್ರಯಾಣ ದರ ಇತರ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ದುಬಾರಿಯಾಗಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸೀದಾಸ್, ವಾಹನ ತೆರಿಗೆ ಸಂಬಂಧಿತ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸಾರಿಗೆ ಸಚಿವರು ಒಮ್ಮತದ ನಿರ್ಧಾರಕ್ಕೆ ಬರಬೇಕಾಗಿದೆ ಎಂದರಲ್ಲದೇ ದರ ನಿಗದಿ ಆಯಾ ವಿಮಾನ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದ್ದು ತಾನು ಕೂಡ ಈಗಾಗಲೇ ಸಂಸ್ಥೆಗಳ ಗಮನ ಸೆಳೆದಿರುವದಾಗಿ ಹೇಳಿದರು.
ಉತ್ತರ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಸಿ.ವಿ. ದೀಪಕ್ ಮಾತನಾಡಿ, ಮಲಬಾರ್ ಪ್ರವಾಸೀ ವಲಯದ ಕಣ್ಣೂರು, ಕೊಡಗು, ಬೇಕಲ್, ವೈನಾಡ್ ಮತ್ತು ಮೈಸೂರಿಗೆ ಸೂಕ್ತ ರೀತಿಯಲ್ಲಿ ಪ್ರವಾಸೀ ಪ್ಯಾಕೇಜ್ ರೂಪುಗೊಳ್ಳಬೇಕಾಗಿದ್ದು ಈ ಜಿಲ್ಲೆಗಳ ಹೊಟೇಲ್, ಚೇಂಬರ್ ಸಂಘಟನೆಗಳ ಪ್ರಮುಖರು ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಪ್ರವಾಸೀ ಪ್ಯಾಕೇಜ್ ರೂಪಿಸಬೇಕಾಗಿದೆ ಎಂದರು. ಕಣ್ಣೂರು, ವೈನಾಡ್ ಚಹಾ, ಕೊಡಗಿನ ಕಾಫಿಗೂ ಜಾಗತಿಕ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯ ಜತೆ ಸಂಬಾರ ಪದಾರ್ಥಗಳಿಗೂ ಬೇಡಿಕೆ ಕುದುರಲಿರುವ ಭರವಸೆ ತನ್ನದೆಂದು ದೀಪಕ್ ಹೇಳಿದರು.
ಕೇರಳ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಣಿ ಜಾರ್ಜ್, ಕೊಡಗು ಹೋಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್, ಖಚಾಂಚಿ ಭಾಸ್ಕರ್, ಗೌರವಸಲಹೆಗಾರ ಅನಿಲ್ ಎಚ್.ಟಿ, ಕೊಡಗು ಟ್ರಾವಲ್ ಅಸೋಸಿಯೇಷನ್ ಅಧ್ಯಕ್ಷ ಚೆಯ್ಯಂಡ ಸತ್ಯ, ಕಾರ್ಯದರ್ಶಿ ವಸಂತ್, ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ನಿರ್ದೇಶಕ ಅಂಬೆಕಲ್ ನವೀನ್ ಕುಶಾಲಪ್ಪ, ಹೋಟೇಲ್ ಅಸೋಸಿಯೇಷನ್ ನಿರ್ದೇಶಕರು ಗಳಾದ ಮೋಹನ್ ದಾಸ್, ಕೋಠಿ, ಸಿದ್ದು, ಬಷೀರ್, ದಿನೇಶ್ ಕಾರ್ಯಪ್ಪ, ಮಂಜುನಾಥ್ ಬೇರೇರ, ಕುಶಾಲನಗರದ ಬಷೀರ್, ಶಜಿಲ್, ಅಂಜನ್ ಪ್ರಸಾದ್ ಸೇರಿದಂತೆ ಕರ್ನಾಟಕ, ಕೇರಳದ ಪ್ರವಾಸೋದ್ಯ ಮಿಗಳು, ಸಂಶೋಧಕರು, ಸಾಹಿತಿಗಳು, ಕೇರಳ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.