ಸುಂಟಿಕೊಪ್ಪ, ಫೆ. 9: ಬಾಲ್ಯಾವಸ್ಥೆಯಿಂದ ಹದಿಹರೆಯಕ್ಕೆ ಕಾಲಿಡುವ ಪ್ರೌಢವಸ್ಥೆಯ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ರಕ್ಷಣೆ ಹಾಗೂ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯಿತಿ ಯುನಿಸೆಫ್ ಬೆಂಬಲಿತ ಸಮಗ್ರ ಕೊಡಗು ಸ್ಪಂದನ ಯೋಜನೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಸಂಘ ಹಾಗೂ ಹೆಲ್ತ್ ಕ್ಲಬ್ ವತಿಯಿಂದ ಶಾಲಾ ಹೆಣ್ಣು ಮಕ್ಕಳಿಗೆ ಆರೋಗ್ಯ ಕಾರ್ಯಕ್ರಮದಡಿ ಋತು ಸ್ರಾವ ಶುಚಿತ್ವದ ನಿರ್ವಹಣೆ ಮತ್ತು ವೈಯಕ್ತಿಕ ಸುರಕ್ಷತೆ ಕುರಿತು ಏರ್ಪಡಿಸಿದ್ದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾತನಾಡಿ, ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರೆ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯ ಎಂದರು. ವಿಜ್ಞಾನ ಶಿಕ್ಷಕಿ ಎಂ.ಎನ್. ಲತಾ ಮಾತನಾಡಿ, ಹೆಣ್ಣು ಮಕ್ಕಳು ಮುಜುಗರ ಬಿಟ್ಟು ವೈಯಕ್ತಿಕ ಸ್ವಚ್ಛತೆ ಕಾಪಾಡುವ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದ ಸಂಯೋಜಕಿ ಡಾ. ವೀಣಾ ಕುಂಬಾರ್ ಮಕ್ಕಳಿಗೆ ಋತುಸ್ರಾವದ ಸಂದರ್ಭ ಸ್ವಚ್ಛತೆ ಕಾಪಾಡುವದು ಹೇಗೆ? ಎಂಬ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು. ಸಂಪನ್ಮೂಲ ವ್ಯಕ್ತಿ ಶಿಕ್ಷಕಿ ಆರ್. ಸಮತಾ ಋತುಸ್ರಾವದಲ್ಲಿ ಉಂಟಾಗುವ ಬದಲಾವಣೆ ಹಾಗೂ ತೊಂದರೆಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಮಾಹಿತಿ ನೀಡಿದÀರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸ್ವಾತಿ ಹದಿಹರೆಯದಲ್ಲಿ ಉಂಟಾಗುವ ತಪ್ಪು ಕಲ್ಪನೆ ಮತ್ತು ಗೊಂದಲವನ್ನು ಹೇಗೆ ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು. ಸಂಚಾಲಕರುಗಳಾದ ಸಂಪನ್ಮೂಲ ವ್ಯಕ್ತಿ ಜಿ.ಸಿ. ಶರತ್‍ಕುಮಾರ್, ಕೇಶವಮೂರ್ತಿ, ಯುನಿಸೆಫ್‍ನ ಆಪ್ತ ಸಮಾಲೋಚಕ ಮನೋಹರ್, ಶಿಕ್ಷಕರಾದ ಟಿ.ಜಿ. ಪೇಮ್‍ಕುಮಾರ್, ಎಸ್.ಆರ್. ಚಿತ್ರ ಇದ್ದರು. ವಿದ್ಯಾರ್ಥಿನಿ ಅನ್ನಪೂರ್ಣ ವಂದಿಸಿದರು.