ಗೋಣಿಕೊಪ್ಪಲು, ಫೆ. 9: ಕೊಡಗು ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಸನ ಹಾಗೂ ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು ಇವರ ವತಿಯಿಂದ ಅತ್ತೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಆಧುನಿಕ ಹೈನುಗಾರಿಕೆ ವಿಷಯದಲ್ಲಿ ಪ್ರಾತ್ಯಕ್ಷಿತೆ ನೀಡಲಾಯಿತು.
ರೈತರ ಜೀವನ ಮಟ್ಟ ಸುಧಾರಿಸಲು ಹೈನುಗಾರಿಕೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನದ ವಿಷಯ ತಜ್ಞ ಡಾ. ಸುರೇಶ್ ಡೈರಿ ಘಟಕ, ಆಡು ಘಟಕ, ಹಂದಿ ಘಟಕ ಹಾಗೂ ಗಿರಿರಾಜ ಕೋಳಿ ಘಟಕಗಳ ಬಗ್ಗೆ ಮಾಹಿತಿ ಒದಗಿಸಿದರು. ಆಧುನಿಕ ರೀತಿಯಲ್ಲಿ ಯಂತ್ರ ಬಳಸಿ ಹಾಲು ಕರೆಯುವ ವಿಧಾನ, ಕೊಟ್ಟಿಗೆ ನಿರ್ವಹಣೆ, ಹುಲ್ಲು ಕತ್ತರಿಸುವ ಯಂತ್ರ ಹಾಗೂ ಬಹುವಾರ್ಷಿಕ ಮೇವಿನ ಬೆಳೆಯ ತಾಕುಗಳ ಬಗ್ಗೆ ವಿವರ ಒದಗಿಸಿದರು.
ಮಡಿಕೇರಿಯ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎ.ಬಿ. ತಮ್ಮಯ್ಯ, ಹಾಸನ ಪಶು ಪರೀಕ್ಷಕರ ತರಬೇತಿ ಕೇಂದ್ರದ ಮುಖ್ಯ ತರಬೇತುದಾರ ಡಾ. ಅಂಬುಜಾಕ್ಷಿ, ಗೋಣಿಕೊಪ್ಪ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ರಮೇಶ್, ವೀರಾಜಪೇಟೆ ಪಶು ವೈದ್ಯಾಧಿಕಾರಿ ಡಾ. ಶಾಂತೇಶ್, ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಗಿರೀಶ್, ಬಾಳೆಲೆ ಪಶು ವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್, ಸೇರಿದಂತೆ ಅನೇಕ ವೈದ್ಯರುಗಳು ಭಾಗವಹಿಸಿದ್ದರು. ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಬಾಳೆಲೆ, ಕಾನೂರು ಹಾಗೂ ಕುಟ್ಟ ಭಾಗದ ರೈತರು ಪ್ರಯೋಜನ ಪಡೆದುಕೊಂಡರು.