ವೀರಾಜಪೇಟೆ, ಪೆ. 11: ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಮಟ್ಟದ ಅಂತರ ಕಾಲೇಜು ಫುಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸ ಲಾಗಿತ್ತು. ಸೆಂಟ್ ಆ್ಯನ್ಸ್ ಕಪ್ ಎಂಬ ಹೆಸರಿನೊಂದಿಗೆ ಆಯೋಜಿಸಲಾದ ಪಂದ್ಯಾವಳಿಯ ಉದ್ಘಾಟನೆಯನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ನೆರವೇರಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ. ಮದಲೈಮುತ್ತು ಅವರು ಮಾತನಾಡಿ, ಈ ಒಂದು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯ ಮುಖಾಂತರ ಸಂಸ್ಥೆಯು ಕಾಲೇಜುಗಳ ನಡುವೆ ಬಾಂಧವ್ಯ ತರಲು ಪ್ರಯತ್ನ ಮಾಡಿದೆ ಎಂದರು.

ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್, ಸೆಂಟ್ ಆ್ಯನ್ಸ್ ಚರ್ಚ್‍ನ ಸಹಾಯಕ ಧರ್ಮಗುರುಗಳಾದ ಫಾ. ರೋಶನ್, ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ವಿ. ರಾಜು ರೈ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿವಿಧ ಕಾಲೇಜುಗಳ ಸುಮಾರು 16 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿದ್ಯಾರ್ಥಿನಿ ವಿಲೀನ ನಿರೂಪಿಸಿ, ನೇಹಾ ಮೇರಿ ಸ್ವಾಗತಿಸಿ, ರಾಕೇಶ್ ವಂದಿಸಿದರು.