ನಾಪೋಕ್ಲು, ಫೆ. 10: ಇಲ್ಲಿಗೆ ಸಮೀಪದ ಎಮ್ಮೆಮಾಡು ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಸರ್ಕಾರವೇ ಅಕ್ರಮವಾಗಿ ಅನುಮತಿ ನೀಡಿದೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಕುರುಳಿ ಗ್ರಾಮದ ಕಾವೇರಿ ನದಿ ತೀರದಲ್ಲಿ ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸರ್ಕಾರದ ಸಂಬಂಧಪಟ್ಟ ಇತರ ಇಲಾಖೆಗಳು ಸೇರಿ ಕಾವೇರಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಕೆಲವರಿಗೆ ಅಕ್ರಮವಾಗಿ ಅನುಮತಿ ನೀಡಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ನದಿಯಲ್ಲಿ ಮರಳುಗಾರಿಕೆಯಿಂದಾಗಿ ಎಮ್ಮೆಮಾಡು ಗ್ರಾಮದ ನೀರಿನ ಮೂಲವೇ ಬತ್ತಿಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲ ನದಿಗೆ ಅಡ್ಡಲಾಗಿ ಕಟ್ಟಲು ತುಂಬಿಸಿಡಲಾಗಿದ್ದ ಮರಳು ಚೀಲಗಳನ್ನು ಧ್ವಂಸಗೊಳಿಸಿದರು.

ಈ ಭಾಗದಲ್ಲಿ ಮರಳು ತೆಗೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯನ್ನು ಪಡೆದಿಲ್ಲ ಮಾತ್ರವಲ್ಲ ನದಿ ತೀರದ ಭೂಮಿ ಮಾಲೀಕರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆದರಿಕೆ ಒಡ್ಡಿ ಮರಳು ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ವಿಶ್ವಪ್ರಸಿದ್ಧ ಎಮ್ಮೆಮಾಡು ದರ್ಗಾದ ಬಾವಿ ಕೂಡ ಬತ್ತಿಹೋಗಿದ್ದು ಇದಕ್ಕೆ ಈ ಭಾಗದಲ್ಲಿ ನಡೆಯುತ್ತಿರುವ ವ್ಯಾಪಕ ಮರಳುಗಾರಿಕೆಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಯಾವದೇ ಕಾರಣಕ್ಕೂ ಈ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅವಕಾಶ ನೀಡುವದಿಲ್ಲ, ಒಂದು ವೇಳೆ ಮರಳು ತೆಗೆಯಲು ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.