ಸೋಮವಾರಪೇಟೆ,ಫೆ.11: ಕಂಪೆನಿಗಳಿಂದ ಅಳವಡಿಸಿದ ಸೈಲೆನ್ಸರ್‍ಗಳನ್ನು ತೆಗೆಸಿ ಕರ್ಕಶವಾಗಿ/ಅತೀ ಹೆಚ್ಚು ಶಬ್ದ ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿಕೊಳ್ಳುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಲ್ಲಿ ಕೆಲವೊಂದು ಬೈಕ್ ಸವಾರರು ಅತೀ ಹೆಚ್ಚು ಶಬ್ದ ಬರುವ ಸೈಲೆನ್ಸರ್‍ಗಳನ್ನು ತಮ್ಮ ಬೈಕ್‍ಗೆ ಅಳವಡಿಸಿ ಸಂಚರಿಸುವದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದು, ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕಾನೂನು ಕ್ರಮ ಜರುಗಿಸಬೇಕೆಂದು ಹಲವರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

ಕಂಪೆನಿಗಳಿಂದ ನಿಯಮಾನುಸಾರ ಅಳವಡಿಸುವ ಕೆಲ ಭಾಗಗಳನ್ನು ತೆಗೆಸಿ ತಮಗಿಷ್ಟ ಬಂದಂತೆ ‘ಆಲ್ಟ್ರೇಷನ್’ ಮಾಡಿಕೊಂಡು, ಕರ್ಕಶ ಶಬ್ದವನ್ನು ಹೊರಹಾಕುತ್ತಾ ಹಲವಷ್ಟು ಬೈಕ್‍ಗಳು ಪಟ್ಟಣದಲ್ಲಿ ಸಂಚರಿಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳು ತೆರಳುವ ಸಂದರ್ಭ ಹೆಚ್ಚು ಓಡಾಟ ನಡೆಸುತ್ತಿರುತ್ತವೆ. ಇಂತಹ ಬೈಕ್‍ಗಳು ಮತ್ತು ಚಾಲಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ಒಂದು ವೇಳೆ ವಾಹನಗಳನ್ನು ‘ಆಲ್ಟ್ರೇಷನ್’ ಮಾಡಿಸಿಕೊಳ್ಳಬೇಕಿದ್ದರೆ ಸಂಬಂಧಿಸಿದ ಆರ್‍ಟಿಓ ಕಚೇರಿಯಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ಸರಕು ಸಾಗಣೆ, ಪಾನಿಪೂರಿ, ಐಸ್‍ಕ್ರೀಂ ಮಾರಾಟ ಸೇರಿದಂತೆ ಇನ್ನಿತರ ಅವಶ್ಯಕತೆಗಳಿಗೆ ಆರ್‍ಟಿಓ ಅಧಿಕಾರಿಗಳೇ ಅನುಮತಿ ನೀಡಿ, ಅದಕ್ಕೆ ದೃಡೀಕರಣ ಪತ್ರವನ್ನೂ ನೀಡುತ್ತಾರೆ. ಆದರೆ ಸೈಲೆನ್ಸರ್ ಬದಲಾವಣೆಗೆ ಅನುಮತಿ ನೀಡುವದಿಲ್ಲ. ಆದರೂ ಸಹ ಕೆಲವರು ಕಾನೂನು ನಿಯಮ ಮೀರಿ ಕರ್ಕಶ ಶಬ್ದ ಹೊರಹಾಕುವಂತಹ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಕಚೇರಿಯ ಸಿಬ್ಬಂದಿ ಯೋರ್ವರು ಪತ್ರಿಕೆಗೆ ತಿಳಿಸಿದ್ದಾರೆ.

ಕರ್ಕಶ ಶಬ್ದ ಹೊರಹಾಕುವ ವಾಹನಗಳ ವಿರುದ್ಧ ಆರ್‍ಟಿಓ ಇಲಾಖೆಯ ಇನ್ಸ್‍ಪೆಕ್ಟರ್ ಕಾನೂನು ಕ್ರಮ ಜರುಗಿಸಬೇಕಿದ್ದರೂ ಸಹ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಾತ್ರ ಇಂತಹ ಕಾರ್ಯಾಚರಣೆಯನ್ನು ನಡೆಸಿಲ್ಲ. ಪರಿಣಾಮ ದಿನದಿಂದ ದಿನಕ್ಕೆ ‘ಆಲ್ಟ್ರೇಷನ್’ ಬೈಕ್‍ಗಳ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಇದರೊಂದಿಗೆ ಕಂಪೆನಿಯವರು ಅಳವಡಿಸಿದ ಬಲ್ಬ್‍ಗಳ ಬದಲಿಗೆ ಕೆಲ ವಾಹನಗಳ ಮಾಲೀಕರು ಎಲ್‍ಇಡಿ ಬಲ್ಬ್‍ಗಳನ್ನು ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಅಳವಡಿಸಿಕೊಂಡಿದ್ದು, ರಾತ್ರಿ ವೇಳೆಯಲ್ಲಿ ಸಂಚರಿಸುವ ಇತರ ವಾಹನಗಳ ಸವಾರರಿಗೆ ತೊಂದರೆ ತಂದೊಡ್ಡುತ್ತಿದೆ. ಅತೀ ಪ್ರಖರ ಬೆಳಕು ಹೊರ ಹಾಕುವ ವಾಹನಗಳಿಂದ ಇತರ ವಾಹನ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿಕೊಂಡಿರುವ ವಾಹನಗಳ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈಗಾಗಲೇ ಶನಿವಾರಸಂತೆ ವ್ಯಾಪ್ತಿಯಲ್ಲಿ ಅಲ್ಲಿನ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಇಂತಹ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಸೋಮವಾರಪೇಟೆಯಲ್ಲೂ ಇಂತಹದೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು, ಆಲ್ಟ್ರೇಷನ್ ಬೈಕ್‍ಗಳು ಪಟ್ಟಣದಲ್ಲಿ ಸಂಚರಿಸುವದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವದು. ಈಗಾಗಲೇ ಸಂಚಾರ ನಿಯಮ ಸುಗಮಗೊಳಿಸಲು ಇಲಾಖೆಯಿಂದ ಹಲವಷ್ಟು ಕ್ರಮ ಕೈಗೊಳ್ಳಲಾಗಿದೆ. ವಾಹನಗಳ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಮದ್ಯಪಾನ ಮಾಡಿ ಚಾಲನೆ ಮಾಡುವ ಪ್ರಕರಣಗಳಿಗೆ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ಕಶ ಶಬ್ದ ಹೊರಹಾಕುವ ವಾಹನಗಳು, ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿರುವ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.