ಸಿದ್ದಾಪುರ, ಫೆ. 10 : ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ನಿಗೂಢವಾಗಿ ನಾಪತ್ತೆಯಾದ ವಿದ್ಯಾರ್ಥಿನಿಯ ಚಪ್ಪಲಿ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣವು ತೀವ್ರ ಆತಂಕ ಮೂಡಿಸಿದೆ.
ಕಾಫಿ ತೋಟದ ಕಾರ್ಮಿಕ ದಂಪತಿಗಳ ಪುತ್ರಿ, ತಾ. 4 ರಂದು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಾಣೆಯಾಗಿದ್ದು, ಪೋಷಕರ ಪುಕಾರಿನ ಮೇರೆಗೆ ಸಿದ್ದಾಪುರ ಪೊಲೀಸರು ಸ್ಥಳೀಯರ ಸಹಕಾರ ದೊಂದಿಗೆ ತನಿಖೆ ನಡೆಸಿದ್ದು ವಿದ್ಯಾರ್ಥಿನಿಯ ಪತ್ತೆಯಾಗಲಿಲ್ಲ. ಈ ಸಂದರ್ಭ ವಿದ್ಯಾರ್ಥಿನಿಯು ಕಾಣೆ ಯಾದ ದಿನದಂದು ಕೊನೆಯದಾಗಿ ತೋಟದ ವಾಚ್ ಮ್ಯಾನ್ ಕೆರೆಯ ಸಮೀಪ ನೋಡಿರುವದಾಗಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಕಳೆದ ಗುರುವಾರದಂದು ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ತನಿಖೆಯ ಭಾಗವಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ನಾಪತ್ತೆಯಾದ ಯುವತಿಯ ಯಾವದೇ ಕುರುಹು ಕೂಡ ದೊರಕದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದಾದ ನಂತರವು ಕೂಡ ತೋಟದ ಕಾರ್ಮಿಕರು ರಾತ್ರಿ ಹಗಲೆನ್ನದೆ ಕಾಣೆಯಾದ ವಿದ್ಯಾರ್ಥಿನಿಯ ಪತ್ತೆಗಾಗಿ ತೋಟ ದೊಳಗೆ ಹುಡುಕಾಟ ನಡೆಸಿದರು. ತುಳುವೆರ ಸಂಘದವರು ವಿದ್ಯಾರ್ಥಿನಿ ಯ ನಾಪತ್ತೆ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕೆಂದು ಡಿವೈಎಸ್‍ಪಿ ಗೆ ದೂರು ನೀಡಿದರು.
ವಿದ್ಯಾರ್ಥಿನಿಯು ಕಾಣೆಯಾಗಿ ಒಂದು ವಾರವಾಗಿದ್ದು, ಭಾನುವಾರ ದಂದು ತೋಟದ ಕಾರ್ಮಿಕರು ಕಾಫಿ ಕೊಯ್ಯಲು ತೆರಳಿದ್ದ ಸಂದರ್ಭ ಕಾಣೆಯಾದ ವಿದ್ಯಾರ್ಥಿನಿಯ ಲೈನ್ ಮನೆಯ ಅನತಿ ದೂರದಲ್ಲಿದ್ದ ಬಿದ್ದ ಒಣಗಿದ ಮರದ ಕೆಳಗಡೆ ವಿದ್ಯಾರ್ಥಿನಿಯ ಕಾಲೇಜು ಬ್ಯಾಗ್ ಹಾಗೂ ಪಾದರಕ್ಷೆ ಗೋಚರಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ನಂತರ ಜಿಲ್ಲಾ ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿತು. ತೋಟದಲ್ಲಿದ್ದ ವಿದ್ಯಾರ್ಥಿನಿಯ ಬ್ಯಾಗ್ ಹಾಗೂ ಪಾದರಕ್ಷೆ ಇದ್ದ ಸ್ಥಳದಿಂದ ಕಾರ್ಯಾಚರಣೆ ಆರಂಭಿಸಿದ ಶ್ವಾನದಳ ತೋಟದ ಕಾಲು ರಸ್ತೆಯ ಮೂಲಕ, ತೋಟದ ಲೈನ್ ಬಳಿ ಸಾಗಿ, ಕಾಫಿ ಕಣದ ಬಳಿಯ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಈ ಸಂದರ್ಭ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸಿದ್ದಾಪುರ ಠಾಣಾಧಿಕಾರಿ ದಯಾನಂದ್, ಗ್ರಾ.ಪಂ ಸದಸ್ಯ ಜಾಪು ಹಾಗೂ ತುಳುವೆರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
-ಚಿತ್ರ, ವರದಿ : ವಾಸು