ಮಡಿಕೇರಿ, ಫೆ. 10: ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕುಯ್ಯಂಗೇರಿ ಭಗವತಿ ಯುವಕ ಸಂಘ, ಸ್ಥಳೀಯ ಕುಂಬಳದಾಳು ತಂಡವನ್ನು 2-1 ರ ನೇರ ಸೆಟ್‍ಗಳಿಂದ ಸೋಲಿಸುವದರ ಮೂಲಕ ಹೊದ್ದೂರು ಫ್ರೆಂಡ್ಸ್ ಕಪ್ಪನ್ನು ತನ್ನದಾಗಿಸಿಕೊಂಡಿತು. ಅತೀಥೆಯ ಕುಂಬಳದಾಳು ತಂಡ ರನ್ನರ್ಸ್ ಟ್ರೋಫಿ ಹಾಗೂ ನಗದಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಸ್ಥಳೀಯ ಗ್ರಾಮದ ಶ್ರೀ ಅಯ್ಯಪ್ಪ ಕಾಲೋನಿಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಹೊದ್ದೂರು ಫ್ರೆಂಡ್ಸ್ ಬಳಗದ ವಾಲಿಬಾಲ್ ಪಂದ್ಯಾಟದಲ್ಲಿ ಗ್ರಾಮದ 8 ತಂಡಗಳು ಭಾಗವಹಿಸಿದ್ದವು. ದಿ. ನಿವೃತ್ತ ಸರ್ವೆಯರ್ ಚೆಟ್ಟಿಮಾಡ ಅಪ್ಪಯ್ಯ ಹಾಗೂ ನಿವೃತ್ತ ಶಿಕ್ಷಕಿ ಶಾರದ ಅಪ್ಪಯ್ಯ ಅವರ ಜ್ಞಾಪಕಾರ್ಥ ಅವರ ಮಗ ಅವಿನಾಶ್ ಹಾಗೂ ಸೊಸೆ ನಿವ್ಯಾ ಅವರು ಉದಾರವಾಗಿ ನೀಡಿದ ಟ್ರೋಫಿಯನ್ನು ಪ್ರಥಮ ವಿಜೇತ ತಂಡಕ್ಕೆ ಸೊಸೆ ನಿವ್ಯಾ ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಸನ್ನ ಗಣಪತಿ ಸಂಘದ ಅಧ್ಯಕ್ಷ ಬಾಬು ಪೂಣಚ್ಚ ವಹಿಸಿದ್ದರು. ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷ ಅಮ್ಮಣಂಡ ಪೂಣಚ್ಚ, ಚೆಟ್ಟಿಮಾಡ ವಸಂತ, ನಂದಕುಮಾರ್, ಗ್ರಾಮ ಪಂಚಾಯಿತಿ ಕಂದಾಯ ವಸೂಲಾತಿಯವರಾದ ಹೆಚ್.ಟಿ. ಬಾಬು ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದನ್ನು ವಿತರಿಸಿದರು. ಸಂಘದ ಮಾಜಿ ಅಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.