ಕೂಡಿಗೆ, ಫೆ.11 : ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಪ್ರಮುಖವಾಗಿರುವ ದುಬಾರೆಯ ಪ್ರವಾಸಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.

ದುಬಾರೆಯ ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿಗೆ ಒಂದು ಕೋಟಿ ರೂ ವೆಚ್ಚದ ಪ್ರಸ್ತಾವನೆ ಸರ್ಕಾರದ ಮಟ್ಟಕ್ಕೆ ತಲುಪಿದ ಹಿನ್ನಲೆ ಹಣ ಬಿಡುಗಡೆಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಖುದ್ದಾಗಿ ಸ್ಥಳ ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಕೈಗೊಳ್ಳುವ ಬಗ್ಗೆ ಸಮರ್ಪಕ ಮಾಹಿತಿಯನ್ನು ಪಡೆದರು.

2 ಕೋಟಿ 23 ಲಕ್ಷ ರೂ ಹಣ ದುಬಾರೆಯ ತೂಗು ಸೇತುವೆ ನಿರ್ಮಾಣಕ್ಕಾಗಿ ಬಿಡುಗಡೆಯಾಗಿದ್ದು, ಈಗಿನ ಸ್ಥಿತಿಯಲ್ಲಿ ತೂಗು ಸೇತುವೆ ಕಾಮಗಾರಿಯನ್ನು ಕೈಗೊಳ್ಳುವದರ ವೆಚ್ಚ ದುಬಾರಿಯಾಗಿರುವ ಹಿನ್ನಲೆಯಲ್ಲಿ ಕಾಮಗಾರಿಗೆ 4 ಕೋಟಿ ರೂ ಹಣದ ಅವಶ್ಯಕತೆ ಇದೆ ಎಂದು ತೂಗು ಸೇತುವೆ ನಿರ್ಮಾಣದ ಅಭಿಯಂತರರಾದ ಭಾರದ್ವಾಜ್ ರವರ ಮನವಿಯ ಮೇರೆಗೆ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಈ ಸಂದರ್ಭ ಸ್ಥಳೀಯ ಗ್ರಾಮಸ್ಥರೊಂದಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಹವಾಲನ್ನು ನೀಡಿದರು. ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.