ಮಡಿಕೇರಿ, ಫೆ.11 : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ 18 ವರ್ಷ ಪೂರ್ಣಗೊಂಡವರ ಹೆಸರು ಇದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಕರೆ ನೀಡಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯದಲ್ಲೇ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗುವದರಿಂದ ಪ್ರಥಮ ಹಂತದಲ್ಲಿ 18 ವರ್ಷ ಪೂರ್ಣ ಗೊಂಡವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆಯೇ, ಬಿಟ್ಟು ಹೋಗಿದಲ್ಲಿ ಸೇರ್ಪಡೆ ಮಾಡುವಂತೆ ಜಾಗೃತಿ ಮೂಡಿಸುವಂತೆ ಅವರು ನಿರ್ದೇಶನ ನೀಡಿದರು.

ಕಾಲೇಜು ಹಂತದ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಹಾಗೆಯೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ನೀಡುವಂತೆ ಲಕ್ಷ್ಮಿಪ್ರಿಯ ಸೂಚಿಸಿದರು.

ಪ್ರತೀ ಕಚೇರಿಗಳಲ್ಲಿ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಿಕೊಂಡು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ತಮ್ಮ ಇಲಾಖೆ ಕಚೇರಿಗಳಲ್ಲಿ 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದ್ದಾರೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ತಿಳಿಸಿದರು. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಅರಿವು ಮೂಡಿಸುವಂತೆ ಸೂಚಿಸಿದರು.

ವಿಕಲಚೇತನ ಮತದಾರರನ್ನು ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿಬರಲು ವ್ಯವಸ್ಥೆ ಮಾಡಬೇಕು. ಪ್ರತೀ ಮತಗಟ್ಟೆಯಲ್ಲಿ ತ್ರಿಚಕ್ರ ವಾಹನ ಇದೆಯೇ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 18 ವರ್ಷ ಪೂರ್ಣಗೊಂಡ ವಿಕಲಚೇತನರು ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ್ದಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಪ್ರತಿ ಕಚೇರಿಗಳಲ್ಲಿ ಮತದಾನದ ಮಹತ್ವದ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೋ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆಂಚಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ, ಪೌರಾಯುಕ್ತರಾದ ಎಂ.ಎಲ್.ರಮೇಶ್, ವೀರಾಜಪೇಟೆ ಪ.ಪಂ.ಮುಖ್ಯಾಧಿಕಾರಿ ಶ್ರೀಧರ್, ಐಟಿಡಿಪಿ ಇಲಾಖೆಯ ರಂಗನಾಥ್, ಜಿಲ್ಲಾ ವಿಕಲಚೇತನ ಅಧಿಕಾರಿ ದೇವರಾಜು, ಜಿ.ಪಂ.ಯೋಜನಾ ಶಾಖೆಯ ನವೀನ್ ಇತರರು ಹಲವು ಮಾಹಿತಿ ನೀಡಿದರು.