ನಾಪೋಕ್ಲು, ಫೆ.10: ವಿದ್ಯಾದೇಗುಲ ಸ್ಥಾಪನೆಯಾಗುವ ಮೂಲಕ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯಲಿ ಎಂಬ ಸದುದ್ದೇಶದಿಂದ ದಾನಿಗಳು ಉದಾರವಾಗಿ ನೀಡಿದ ಜಾಗ ಒತ್ತುವರಿಯಾಗುವ ಮೂಲಕ ಪರರ ಪಾಲಾಗುತ್ತಿರುವ ಘಟನೆ ನಾಪೋಕ್ಲುವಿನಲ್ಲಿ ಬೆಳಕಿಗೆ ಬಂದಿದೆ.

ನಾಲ್ಕುನಾಡು ವ್ಯಾಪ್ತಿಯು ಶೈಕ್ಷಣಿಕವಾಗಿ ಸರ್ವಾಂಗೀಣ ಅಭಿವೃದ್ಧಿಯಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೂಲಕ ನಾಪೋಕ್ಲು ಪಟ್ಟಣಕ್ಕೆ ಹೆಸರು ತರಲಿ ಎಂಬ ಉದ್ದೇಶದಿಂದ ವಿದ್ಯಾಸಂಸ್ಥೆ ಸ್ಥಾಪಿಸಲು ನಾಪೋಕ್ಲುವಿನ ಬೊಳ್ಳಪಂಡ, ಚೋಕಿರ, ಕೀಕಂಡ, ಪೊರವಡ ಹಾಗೂ ಮಕ್ಕಿ ಬ್ರಾಹ್ಮಣರ ಕುಟುಂಬದ ದಾನಿಗಳು ಸುಮಾರು 50.76 ಎಕರೆಯಷ್ಟು ಜಾಗವನ್ನು ಉದಾರವಾಗಿ ದಾನ ನೀಡಿದ್ದರು. ಈ ಜಾಗದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ತಲೆಎತ್ತುವ ಮೂಲಕ ಈ ವ್ಯಾಪ್ತಿಯ ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ಕಲ್ಪತರುವಾಗಿತ್ತು.

ನಾಪೋಕ್ಲುವಿನ ಐದು ಕುಟುಂಬಸ್ಥರು 1944ರಲ್ಲಿ ಸ.ನಂ. 25ರಲ್ಲಿ 3.82 ಎಕರ್ರೆ, ಸ.ನಂ. 32/1ರಲ್ಲಿ4.50, ಸ.ನಂ. 26/1ರಲ್ಲಿ 3.10, ಸ.ನಂ. 26/3ರಲ್ಲಿ 3 ಎಕರೆ, ಸ.ನಂ. 26/2ರಲ್ಲಿ 0.04, ಸ.ನಂ. 28/4ರಲ್ಲಿ 5.89, ಸ.ನಂ. 29/2ರಲ್ಲಿ 1.53, ಸ.ನಂ. 12/1ರಲ್ಲಿ 8.77, ಸ.ನಂ.18/3ರಲ್ಲಿ 20.11 ಎಕರೆ ಸೇರಿದಂತೆ ಒಟ್ಟು 50.76 ಎಕರೆಯಷ್ಟು ಜಾಗವನ್ನು ದಾನನೀಡಿದ್ದರು. ಇದರಲ್ಲಿ 11.22 ಎಕರೆ ಜಾಗವನ್ನು ಫೆ.29-2012ರಲ್ಲಿ ಸರ್ಕಾರಿ ಪದವಿ ಕಾಲೇಜಿಗೆ ನೀಡಲಾಗಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ದಾನಿಗಳು ಸದುದ್ದೇಶದಿಂದ ನೀಡಿದ ಜಾಗವಿಂದು ಒತ್ತುವರಿಯಾಗಿರುವದು ಅಸಮಾಧಾನಕ್ಕೆ ಕಾರಣವಾಗಿದೆ.

ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಿಂತು ಜಾಗದ ಒತ್ತುವರಿಯನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲರು ಹಲವು ಬಾರಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನಾದರೂ ಜಿಲ್ಲಾಧಿಕಾರಿಗಳು ಗಮನ ಹರಿಸಿ ವಿದ್ಯಾಸಂಸ್ಥೆಗೆ ಸೇರಿದ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ.

ಪ್ರಮುಖರ ಆಗ್ರಹ

ನಾಪೋಕ್ಲು ಪಟ್ಟಣ ವ್ಯಾಪ್ತಿಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಲಿ ಎಂಬ ಉದ್ದೇಶದಿಂದ ನಾಪೋಕ್ಲುವಿನ ಐದು ಕುಟುಂಬಗಳು ದಾನ ನೀಡಿದ ಜಾಗವನ್ನು ವಿದ್ಯಾಸಂಸ್ಥೆಗೆ ನೀಡಿದ್ದು, ಈ ಜಾಗ ಒತ್ತುವರಿದಾರರ ಪಾಲಾಗಿದೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಮಾಡಿದ ಎಲ್ಲಾ ಪ್ರಯತ್ನಗಳು ತಾರ್ಕಿಕ ಹಂತ ತಲಪದಿರುವದು ದುರದೃಷ್ಟಕರ ಇನ್ನಾದರೂ ಈ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಎಲ್ಲಾ ಹಳೆ ವಿದ್ಯಾರ್ಥಿ ಪ್ರಮುಖರು ಮುಂಚೂಣಿಯಲ್ಲಿ ನಿಂತು ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಇಲ್ಲಿನ ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ ಆಗ್ರಹಿಸಿದ್ದಾರೆ.

ಹಿಂದೆ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದ ಸಂದರ್ಭ ನಾಪೋಕ್ಲು, ಪೊನ್ನಂಪೇಟೆ ಮತ್ತು ಸೋಮವಾರಪೇಟೆಯಲ್ಲಿ ಶಾಲೆಗಳನ್ನು ಆರಂಭಿಸುವ ಹಂತದಲ್ಲಿ ನಾಪೋಕ್ಲುವಿನ 54 ಎಕರೆಯಷ್ಟು ಜಾಗವನ್ನು ಉದಾರವಾಗಿ ನೀಡಿದ ಪರಿಣಾಮ; 1944 ರಲ್ಲಿ ಹೈಸ್ಕೂಲ್ ಆರಂಭಗೊಂಡಿತು. ಇದೀಗ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ನಡೆಯುತ್ತಿದ್ದು, ಮೊರಾರ್ಜಿ ಶಾಲೆಯನ್ನು ಆರಂಭಿಸುವ ಯೋಜನೆ ಇದೆ. ಆದರೆ ಶಾಲೆಯ ಜಾಗ ಒತ್ತುವರಿಯಾಗಿದ್ದು, ಇದುವರೆವಿಗೂ ತೆರವುಗೊಳಿಸದಿರುವದು ದುರದೃಷ್ಟಕರ ಎಂದು ಕಲಿಯಂಡ ಹ್ಯಾರಿ ಮಂದಣ್ಣ ಅಭಿಪ್ರಾಯಪಟ್ಟಿದ್ದಾರೆ.

ಜಾಗ ಅತಿಕ್ರಮಣವಾಗಿದ್ದು, ಇದರಲ್ಲಿ 2.50 ಎಕರೆ ಸರ್ಕಾರ ಬೇರೆ ಉದ್ದೇಶಕ್ಕಾಗಿ ವರ್ಗಾಯಿಸಿಕೊಂಡಿದೆ ಉಳಿದ ಜಾಗದ ಒತ್ತುವರಿಯನ್ನು ತೆರವುಗೊಳಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳಿಗೆ ಕಳೆದ ಡಿಸೆಂಬರ್‍ನಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಕಾಲೇಜು ಉಪಪ್ರಾಂಶುಪಾಲೆ ಬಡ್ಡೀರ ನಳಿನಿ ಮಾಹಿತಿ ನೀಡಿದ್ದಾರೆ.