ಮಡಿಕೇರಿ, ಫೆ.11 : ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಕೊಡಗಿನ ಸಂತ್ರಸ್ತ 10 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವದು ಎಂದು ಕಾಲೇಜ್‍ನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಹಾಗೂ ಇತರರು, ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಹಿಂದೆ ಕೊಡಗಿನ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತೀವರ್ಷ ಪ್ರವೇಶ ಪಡೆಯುತ್ತಿದ್ದರು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲೂ ಸ್ಪರ್ಧೆ ಏರ್ಪಟ್ಟಿದ್ದು, ಕಡಿಮೆ ಶುಲ್ಕ ಪಡೆಯುವ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುವದಿಲ್ಲ ಎಂಬ ಭಾವನೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದೆ ಎಂದರು.
ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ ಹೊರತುಪಡಿಸಿ ಉಚಿತ ಶಿಕ್ಷಣ ಸೌಲಭ್ಯ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳಿರುವದಾಗಿ ವಿವರಿಸಿದರು. ಕಾಲೇಜ್‍ನ ಹಳೆ ವಿದ್ಯಾರ್ಥಿ ಮಡಿಕೇರಿಯ ಸಿ.ಎಂ. ಮುತ್ತಪ್ಪ ಮಾತನಾಡಿ, ಕಾಲೇಜ್‍ನÀಲ್ಲಿ ಪ್ರವೇಶ ಪಡೆಯಬಯಸುವ ಕೊಡಗಿನ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ಸಂಸ್ಥೆಯ ಶಾಖೆಯೊಂದನ್ನು ಆರಂಭಿಸಲಾಗುವದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಹಾಗೂ ದ.ಕ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಸುಚರಿತ ಶೆಟ್ಟಿ, ಸಾರಾ ಇಸ್ಮಾಯಿಲ್ ಹಾಗೂ ಸಂಘದ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಪ್ರಾಧ್ಯಾಪಕ ಡಾ. ರಾಧಕೃಷ್ಣ ಉಪಸ್ಥಿತರಿದ್ದರು.