ಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳು ಕಣ್ಮರೆಯಾಗುವದ ರೊಂದಿಗೆ, ಕೃಷಿಕಾಯಕದತ್ತ ಅನ್ನದಾತ ರೈತ ಕೂಡ ನಿರಾಸಕ್ತಿ ಹೊಂದಿರುವ ಅಂಶ ಗೋಚರಿಸ ತೊಡಗಿದೆ. ಇದಕ್ಕೆ ನಿರ್ದೇಶನ ಎಂಬಂತೆ ಕಳೆದ ಮುಂಗಾರುವಿನಲ್ಲಿ ಜಿಲ್ಲೆಯ ಮಟ್ಟಿಗೆ 34 ಸಾವಿರದ ಐದುನೂರು ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಕೃಷಿ ನಿರೀಕ್ಷಿಸಲಾಗಿತ್ತು.ಬದಲಾಗಿ ಕೇವಲ 26,120 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಾಟಿ ಕೃಷಿಯಲ್ಲಿ ಸಾಧನೆ ಕಂಡುಬಂದಿತ್ತು. ಈ ಪೈಕಿ 23,270 ಹೆಕ್ಟೇರ್ ಮಾತ್ರ ಭತ್ತದ ನಾಟಿಯಲ್ಲಿ ಸಾಧನೆ ಕಂಡುಬಂದರೆ, 2,830 ಹೆಕ್ಟೇರ್ ಮುಸುಕಿನ ಜೋಳ ಹಾಗೂ ಕೇವಲ 20 ಹೆಕ್ಟೇರ್ ತಂಬಾಕು ಬೇಸಾಯ ಗೋಚರಿಸಿದೆ. ವರ್ಷವೊಂದರಲ್ಲಿ ಜಿಲ್ಲೆಯ ಮಟ್ಟಿಗೆ ಸರಿ ಸುಮಾರು 8,380 ಹೆಕ್ಟೇರ್ ಕೃಷಿಯಲ್ಲಿ ಹಿನ್ನಡೆ ಉಂಟಾಗಿದೆ.ಅಷ್ಟು ಮಾತ್ರವಲ್ಲದೆ ಜಿಲ್ಲೆಯಲ್ಲಿ ಮಳೆಯ ತೀವ್ರತೆ ನಡುವೆ ಸಂಭವಿಸಿದ ಪ್ರಾಕೃತಿಕ ಹಾನಿಯಿಂದ 7109.04 ಹೆಕ್ಟೇರ್ ಪ್ರದೇಶದ ಭತ್ತ ಬೆಳೆಯುವ ಗದ್ದೆಗಳಿಗೆ ಹಾನಿ ಎದುರಾಗಿದೆ. ಪರಿಣಾಮ ಕೊಡಗಿನಲ್ಲಿ ವರ್ಷಗಳು ಉರುಳಿದಂತೆ ಹವಾಮಾನದಲ್ಲಿಯೂ ಬದಲಾವಣೆಯ ಕಾರಣ ‘ರೈತನ ಅನ್ನದ ಬಟ್ಟಲು’ ಕಿರಿದಾಗುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡು ಬರತೊಡಗಿದೆ. ರೂಪಾಯಿ 4.83 ಕೋಟಿ ನಷ್ಟವೆಂದು ಅಂದಾಜಿಸಲಾಗಿದೆ.
ಸರಾಸರಿ ನಿರೀಕ್ಷೆ: ಕೃಷಿ ಇಲಾಖೆಯ ತಜ್ಞರ ಅನಿಸಿಕೆಯಂತೆ ಕೊಡಗಿನಲ್ಲಿ ಪ್ರತಿ ಹೆಕ್ಟೇರ್ ಭತ್ತದ ಗದ್ದೆಯಲ್ಲಿ ಮುಂಗಾರು ಹಂಗಾಮುವಿನ ಭತ್ತದ ಬೆಳೆಯನ್ನು ಸರಾಸರಿ 45ರಿಂದ 50 ಕ್ವಿಂಟಾಲ್ ನಂತೆ ಅಪೇಕ್ಷಿಸಲಾಗಿದೆ. ಆದರೆ ಪ್ರಸಕ್ತ ಮುಂಗಾರುವಿನಲ್ಲಿ ಎದುರಾಗಿದ್ದ ಹಾನಿಯಿಂದಾಗಿ, ಫಸಲು ಸಕಾಲದಲ್ಲಿ ಅನ್ನದಾತನ ಕೈಗೆ ಎಟುಕದಿರುವ ಕಾರಣ ಇನ್ನೂ ಕೂಡ ಇಲಾಖೆಗೆ ಧಾನ್ಯದ ನಿಖರ ಲೆಕ್ಕ ಲಭ್ಯವಿಲ್ಲವೆಂದು ತಿಳಿದುಬಂದಿದೆ.
13.05 ಲಕ್ಷ ಆಶಯ: ಹೀಗಿದ್ದರೂ ಮುಂಗಾರುವಿನ ಭತ್ತದ ನಾಟಿಯಿಂದ ಈ ಸಾಲಿನಲ್ಲಿ ಜಿಲ್ಲೆಯ ಮಟ್ಟಿಗೆ ಸಾಕಷ್ಟು ಏರುಪೇರು ಕಾಣುವಂತಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ 13.05 ಲಕ್ಷ ಕ್ವಿಂಟಾಲ್ ಭತ್ತವನ್ನು ನಿರೀಕ್ಷಿಸಲಾಗಿದೆ. ರೈತ ವಲಯದ ಅಭಿಪ್ರಾಯದಂತೆ ಮಳೆ ತೀವ್ರತೆ ನಡುವೆ ಬಹುತೇಕ ಭತ್ತಕ್ಕಿಂತಲೂ ಜೊಳ್ಳು ಕಾಣಿಸಿಕೊಂಡು ನಷ್ಟ ಉಂಟಾಗಿದೆ.
ಅಲ್ಲಲ್ಲಿ ಗದ್ದೆ ನಾಶ: ಬಹುಪಾಲು ಭತ್ತ ಬೆಳೆಯುವ ಗ್ರಾಮಗಳಾದ ಹೆಬ್ಬೆಟ್ಟಗೇರಿ, ಕಾಲೂರು, ದೇವಸ್ತೂರು, ಆವಂಡಿ, ಮುಕ್ಕೋಡ್ಲು, ಹಾಲೇರಿ, ಹಟ್ಟಿಹೊಳೆ, ಮಾದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ಮುಂಗಾರುವಿನಲ್ಲಿ ನಾಟಿ ಸಹಿತ ಮಣ್ಣು ಪಾಲಾಗಿರುವ ದೃಶ್ಯ ಗೋಚರಿಸತೊಡಗಿದೆ.
ಈ ಹೊಡೆತದ ಪರಿಣಾಮ ಮುಂಗಾರು ಭತ್ತ ಬೆಳೆಗೆ ಈ ಶತಮಾನದಲ್ಲಿ ಕಂಡುಕೇಳರಿಯದ ಹೊಡೆತದೊಂದಿಗೆ ರೈತರು ಭವಿಷ್ಯದಲ್ಲಿ ಭತ್ತದ ನಾಟಿಯಿಂದ ಇನ್ನಷ್ಟು
(ಮೊದಲ ಪುಟದಿಂದ) ವಿಮುಖರಾಗುವ ಸನ್ನಿವೇಶ ಎದುರಾಗಿದೆ. ಹೀಗಾಗಿ ಇಲಾಖೆಗೂ ಪ್ರಸಕ್ತ ಬೆಳೆಯ ಅಂದಾಜು ನಿಖರವಾಗಿ ಲಭಿಸದಾಗಿದೆ ಎಂದು ಮಾಹಿತಿ ದೊರಕಿದೆ.
ಕೃಷಿ ಇಲಾಖೆ ಮಾಹಿತಿ
ಜಿಲ್ಲೆಯಲ್ಲಿ ಪ್ರಮುಖವಾಗಿ ಭತ್ತ ಮತ್ತು ಮುಸುಕಿನ ಜೋಳವನ್ನು ಆಹಾರದ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿಗೆ 30,500 ಹೆಕ್ಟೇರ್ ಗುರಿ ಬದಲು 23,270 ಪ್ರದೇಶದಲ್ಲಿ ಭತ್ತ, 4,000 ಹೆಕ್ಟೇರ್ ಮುಸುಕಿನ ಜೋಳದ ಗುರಿ ಬದಲಿಗೆ 2,830 ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ಒಟ್ಟು 34500 ಹೆಕ್ಟೇರ್ ಪ್ರದೇಶದಲ್ಲಿ ಆಹಾರದ ಬೆಳೆ ಬೆಳೆಯುವ ಗುರಿ ಹೊಂದಲಾಗಿದ್ದು, 26,100 ಹೆಕ್ಟೇರ್ ಪ್ರದೇಶದಲ್ಲಿ ಆಹಾರದ ಬೆಳೆ ಬೆಳೆಯಲಾಗಿದೆ. ಈ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ವಾಡಿಕೆ ಮಳೆ 2860.7 ಎಂ.ಎಂ. ಇದ್ದು, 2018ರ ಜನವರಿ ಮಾಹೆಯಿಂದ ಡಿಸೆಂಬರ್ 31ರವರೆಗೆ 3686.4 ಎಂ.ಎಂ. ಮಳೆಯಾಗಿದೆ.
ಕೃಷಿಗೆ ಪ್ರೋತ್ಸಾಹಿಸಲು ರೈತರಿಗೆ ಸಹಾಯಧನದಲ್ಲಿ ಕೃಷಿ ಪರಿಕರಗಳು ಮತ್ತು ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ ಕೃಷಿ ಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರೈತರಿಗೆ 30 ಸಣ್ಣ ಟ್ರ್ಯಾಕ್ಟರ್, 298 ಪವರ್ ಟಿಲ್ಲರ್, 1171 ಡೀಸೆಲ್ ಪಂಪ್‍ಸೆಟ್, 315 ಕಟಾವು ಯಂತ್ರ, 24 ನಾಟಿ ಯಂತ್ರ, 1758 ಸಸ್ಯ ಸಂರಕ್ಷಣ ಉಪಕರಣ, 24 ಒಕ್ಕಲು ಯಂತ್ರ, 87 ಭೂಮಿ ಸಿದ್ಧಪಡಿಸುವ ಉಪಕರಣ, 7 ಬೇಲರ್, 3075 ತುಂತುರು ನೀರಾವರಿ ಘಟಕ ಮತ್ತು 27,476 ಟಾರ್ಪಲ್‍ಗಳನ್ನು ವಿತರಿಸಲಾಗಿದೆ. ಒಟ್ಟು 34,265 ಫಲಾನುಭವಿಗಳು ವಿವಿಧ ಯಂತ್ರೋಪಕರಣಗಳನ್ನು ಹಾಗೂ 26,718 ರೈತರು ವಿವಿಧ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಪಡೆದಿದ್ದಾರೆ.
2018-19ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಲ್ಲಿ ಕೃಷಿ ಪರಿಕರಗಳಾದ ಭತ್ತ ಮತ್ತು ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ವಿತರಿಸಲಾಗಿದ್ದು, ಹಸಿರೆಲೆ ಗೊಬ್ಬರದ ಬೀಜ, ಡೋಲೋಮೈಟ್ (ಕೃಷಿ ಸುಣ್ಣ), ಎರೆಗೊಬ್ಬರ, ಸಿಟಿ ಕಾಂಪೋಸ್ಟ್, ಸಾವಯವ ಗೊಬ್ಬರ ಮತ್ತು ಲಘು ಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಮತ್ತು ಗ್ರಾಮೀಣ ಕೃಷಿ ಯಂತ್ರೋಪಕರಣ / ಸೇವಾ ಕೇಂದ್ರಗಳ ಸ್ಥಾಪನೆಗೆ ಎರಡು ಯೋಜನೆಗಳನ್ನು ಅನುಷ್ಟಾನ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ರೈತರುಗಳಿಗೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೆಳೆಗೆ ನೀರು ಒದಗಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.80ರ ಸಹಾಯಧನದಲ್ಲಿ, ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ರೈತರಿಗೆ ಶೇ.90ರ ಸಹಾಯಧನದಲ್ಲಿ ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿದ ನೀರನ್ನು ಮೇಲೆತ್ತಲು 5 ಹೆಚ್‍ಪಿ ಡೀಸೆಲ್ ಪಂಪ್‍ಸೆಟ್‍ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ರೈತರಿಗೆ ಶೇ. 90ರ ಸಹಾಯಧನವನ್ನು ವಿತರಿಸಲಾಗುತ್ತದೆ. ನೀರಿನ ಮಿತ ಬಳಕೆಗಾಗಿ ಎಲ್ಲಾ ವರ್ಗಗಳ ರೈತರಿಗೆ ಶೇ.90ರ ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುತ್ತದೆ.
ಇದುವರೆಗೆ ಒಟ್ಟು 490 ರೈತರಿಗೆ ಕೃಷಿ ಹೊಂಡವನ್ನು ನಿರ್ಮಿಸಿಕೊಡಲಾಗಿದ್ದು, ಪ್ರಸಕ್ತ ಸಾಲಿಗೂ ಈ ಯೋಜನೆ ಮುಂದುವರೆದಿದ್ದು, 1200 ಕೃಷಿ ಹೊಂಡ ನಿರ್ಮಾಣದ ಗುರಿಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಕೃಷಿ ಸಂವರ್ಧನೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ರೈತರು ಸೌಲಭ್ಯಗಳನ್ನು ಹೊಂದಿಕೊಂಡು ಸ್ವಾವಲಂಬನೆಯ ಬದುಕಿಗೆ ಸಂಕಲ್ಪ ತೊಡಬೇಕಿದೆ. -ಶ್ರೀಸುತ