ಮಡಿಕೇರಿ, ಫೆ. 11: ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿಯು, ಕಳೆದ ಎರಡು ವರ್ಷಗಳಿಂದ ಮಳೆಗಾಲದ 8 ತಿಂಗಳು ವಿಳಂಬಗೊಳ್ಳಲು ಕಾರಣವಾಗಿದೆ ಎಂದು ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಆರ್.ಜಿ. ಸಚಿನ್ ‘ಶಕ್ತಿ’ಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವೀರಾಜಪೇಟೆಯ ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಚುರುಕು ಗೊಳಿಸಬೇಕೆಂದು ಆಗ್ರಹಿಸಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಸಮಾಜ ಕಲ್ಯಾಣ ಸಚಿವರಿಗೆ ದೂರು ಸಲ್ಲಿಸಿರುವ ಕುರಿತು, ತಾ. 9ರ ‘ಶಕ್ತಿ’ಯಲ್ಲಿ ಪ್ರಕಟಗೊಂಡಿರುವ ವರದಿಗೆ ನಿರ್ಮಿತಿ ಕೇಂದ್ರ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದಾರೆ.
ಆ ಪ್ರಕಾರ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಸಲಾಗುತ್ತಿರುವ ವೀರಾಜಪೇಟೆಯ ಅಂಬೇಡ್ಕರ್ ಭವನವು 3 ಅಂತಸ್ತಿನ ಕಟ್ಟಡವಾಗಿದೆ. ರೂ. 1.80 ಕೋಟಿ ವೆಚ್ಚದಲ್ಲಿ ಭವನದ ನಿರ್ಮಾಣಕ್ಕೆ 2016ರಲ್ಲಿ ಸರಕಾರಕ್ಕೆ ಅಂದಾಜು ಪಟ್ಟಿಯೊಂದಿಗೆ ಮೊದಲ ಕಂತಿನಲ್ಲಿ 2017 ಮೇ ತಿಂಗಳು ರೂ. 90 ಲಕ್ಷ ಅನುದಾನವೂ ಬಿಡುಗಡೆಗೊಂಡು, ಕಾಮಗಾರಿಗೆ ಚಾಲನೆ ದೊರೆತಿದ್ದಾಗಿ ಸಂಬಂಧಿಸಿದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಕಳೆದ ಸಾಲಿನಲ್ಲಿ ಮತ್ತೆ ರೂ. 50 ಲಕ್ಷ ಹಣ ಬಿಡುಗಡೆಯಾಗಿದ್ದು, ಉಭಯ ವರ್ಷಗಳಲ್ಲಿ ಮಳೆಗಾಲದ 4 ತಿಂಗಳಿನಂತೆ 8 ತಿಂಗಳು ಕೆಲಸ ವಿಳಂಬಗೊಳ್ಳುವಂತಾಯಿತು ಎಂದು ನಿರ್ಮಿತಿ ಕೇಂದ್ರ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಹೀಗೆ ಕಾಮಗಾರಿಯಲ್ಲಿ ವಿಳಂಬದ ಕಾರಣ, ಅನಂತರದಲ್ಲಿ ಜಾಗವನ್ನು ಸಮತಟ್ಟುಗೊಳಿಸಿ, ಸುತ್ತಲೂ ತಡೆಗೋಡೆ ಯೊಂದಿಗೆ ಭವನದ ಕೆಲಸ ಆರಂಭಿಸಿರುವದಾಗಿಯೂ ವಿವರಿಸಿದ್ದಾರೆ.
ಅಲ್ಲದೆ, ಈಗಾಗಲೇ ಸರಕಾರದಿಂದ ಎರಡು ಕಂತಿನಲ್ಲಿ ಬಿಡುಗಡೆಗೊಂಡಿರುವ ರೂ. 1.40 ಕೋಟಿ ಹಣದ ಕೆಲಸ ಮುಗಿದಿದ್ದು, ಇನ್ನು ರೂ. 40 ಲಕ್ಷ ಬಿಡುಗಡೆಯಾಗಬೇಕಿದೆ. ಮಾತ್ರವಲ್ಲದೆ ಜಿಎಸ್‍ಟಿ ತೆರಿಗೆ ರೂ. 20 ಲಕ್ಷಕ್ಕೆ ಸರಕಾರದಿಂದ ಅನುಮೋದನೆ ಪಡೆದು ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.