ಕುಶಾಲನಗರ, ಫೆ. 10: ಕುಶಾಲನಗರ ಕೇಂದ್ರವಾಗಿರಿಸಿ ನೂತನ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ತಾ. 11 ರಂದು (ಇಂದು) ಕುಶಾಲನಗರ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ತಿಳಿಸಿದ್ದಾರೆ.ರಾಜ್ಯ ಸರಕಾರದ ಗಮನ ಸೆಳೆಯಲು ಈ ಪ್ರತಿಭಟನೆ ನಡೆಯಲಿದ್ದು, ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಬಂದ್ ನಡೆಯಲಿದೆ. ಈ ಸಂಬಂಧ ಸ್ಥಾನೀಯ ಸಮಿತಿ ಮತ್ತು ಕೇಂದ್ರ ಸಮಿತಿ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ವಾಹನ ಚಾಲಕರು, ಮಾಲಿಕರ ಜೊತೆ ಬಂದ್‍ಗೆ ಬೆಂಬಲ ಸೂಚಿಸಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ಮಂಗಳವಾರ ಬೆಂಗಳೂರಿಗೆ ನಿಯೋಗ ತೆರಳಿ ಕಾವೇರಿ ತಾಲೂಕು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರನ್ನು ಆಗ್ರಹಿಸಲಾಗುವದು ಎಂದು ತಿಳಿಸಿದ್ದಾರೆ.ಬೆಂಬಲ: ಕುಶಾಲನಗರ ಬಂದ್ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ನಡೆಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಅಧ್ಯಕ್ಷ ಅಮೃತ್‍ರಾಜ್ ತಿಳಿಸಿದ್ದಾರೆ.