ಸೋಮವಾರಪೇಟೆ,ಫೆ.11: ಸಮೀಪದ ಹೊಸತೋಟ ಗ್ರಾಮದಲ್ಲಿ ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕ್ರೀಡೆಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಯಾಗುವದರೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರಲ್ಲದೇ, ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕರ ನಿಧಿಯಿಂದ ರೂ. 1ಲಕ್ಷ ಅನುದಾನ ಒದಗಿಸುವ ದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಬ್ಯಾಟ್ ಹಿಡಿದ ಶಾಸಕರು ಬ್ಯಾಡ್ಮಿಂಟನ್ ಆಡಿದರು.
ಬ್ಯಾಡ್ಮಿಂಟನ್ ಪಂದ್ಯಾವಳಿ: ನೂತನ ಕ್ರೀಡಾಂಗಣ ಉದ್ಘಾಟನೆ ನಂತರ ದಿ. ಚಂಗಣ್ಣಿ ಸ್ಮರಣಾರ್ಥ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗೌತಮ್ ಶಿವಪ್ಪ ವಹಿಸಿದ್ದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ರವಿ ಕೆ. ನಾಯರ್, ಗ್ರಾ.ಪಂ. ಅಧ್ಯಕ್ಷೆ ಸುಮಾ, ಪ್ರಮುಖರಾದ ಲೋಕೇಶ್, ಸೈಯದ್ ಬಷೀರ್, ಷರೀಫ್, ನಾಸೀರ್, ಜಲೀಲ್, ನಿಯಾತ್ ಚಂಗಪ್ಪ ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ ಜಗ್ಗು ತಂಡ ಪ್ರಥಮ, ಗಣಪತಿ ತಂಡ ದ್ವಿತೀಯ, ಹರ್ಷಾದ್ ತಂಡ ತೃತೀಯ ಸ್ಥಾನ ಪಡೆದರು.