ಗೋಣಿಕೊಪ್ಪಲು, ಫೆ. 11: ದ.ಕೊಡಗಿನಲ್ಲಿ ಆಗಿಂದ್ದಾಗೆ ಆನೆ, ಹುಲಿ, ಕರಡಿಗಳು ಮಾನವನ ಮೇಲೆರಗಿ ಅನಾಹುತಗಳನ್ನು ನಡೆಸುತ್ತಿದ್ದವು. ಇದೀಗ ಕಾಡಂದಿಯು ಮಗುವಿನ ಮೇಲೆ ದಾಳಿ ನಡೆಸುವ ಮೂಲಕ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಸೋಮವಾರ ಮುಂಜಾನೆ ಪೊನ್ನಂಪೇಟೆ ಸಮೀಪದ ಕಿರುಗೂರು ಹೊನ್ನಿಕೊಪ್ಪ ಬಳಿಯಲ್ಲಿ ಕಾಡು ಹಂದಿಯು ಲಕ್ಷ್ಮಿ (6) ಮೇಲೆರಗಿ ಧಾಳಿ ನಡೆಸಿದೆ. ತಂದೆ ತಾಯಿಯು ಜೋರಾಗಿ ಕಿರುಚಿಕೊಂಡ ನಂತರ ಕಾಡು ಹಂದಿಯು ಕಾಫಿ ತೋಟದಲ್ಲಿ ಮಾಯವಾಗಿದೆ.(ಮೊದಲ ಪುಟದಿಂದ) ಕೂಲಿ ಕಾರ್ಮಿಕರಾದ ಸುರೇಶ ತನ್ನ ಮಗಳಾದ ಲಕ್ಷ್ಮಿಯೊಂದಿಗೆ ಮುಂಜಾನೆ ಮಾಯಮುಡಿ ಸಮೀಪದ ಬಂಧುಗಳ ಮನೆಯಿಂದ ಹೊರಟು ಆಟೋ ರಿಕ್ಷಾದಲ್ಲಿ ಕಾಫಿ ಕೆಲಸಕ್ಕೆಂದು ಕಿರುಗೂರು ಹೊನ್ನಿಕೊಪ್ಪಲುವಿನ ಲೈನ್‍ಮನೆಯತ್ತ ಆಗಮಿಸುತ್ತಿದ್ದರು. ಮುಖ್ಯ ರಸ್ತೆಯಿಂದ ಆಟೋ ರಿಕ್ಷಾ ಇಳಿದು ಲೈನ್ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಫಿ ತೋಟದಲ್ಲಿದ್ದ ಕಾಡು ಹಂದಿಯು ಮಗುವಿನ ಮೇಲೆ ಎರಗಿದೆ.ಇದರಿಂದ ಲಕ್ಷ್ಮಿಯ ಎಡಗಾಲಿಗೆ ತೀವ್ರ ಗಾಯಗಳಾಗಿದ್ದು ಪ್ರಾಣಾಪಾಯ ದಿಂದ ಪಾರಾಗಿದ್ದಾಳೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಮಗುವನ್ನು ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಟ್ಟಿದ್ದಾರೆ. ಈ ಭಾಗವು ತಿತಿಮತಿ ಅರಣ್ಯ ವ್ಯಾಪ್ತಿಗೆ ಸೇರಿರುವದರಿಂದ ವನ್ಯ ಜೀವಿಗಳು ಅರಣ್ಯದಿಂದ ಕಾಫಿ ತೋಟದತ್ತ ಲಗ್ಗೆ ಇಡುತ್ತಿವೆ. ವನ್ಯ ಜೀವಿಗಳ ಬಗ್ಗೆ ಎಚ್ಚರವಹಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪೊನ್ನಂಪೇಟೆ ಹೋಬಳಿ ಘಟಕದ ಸಂಚಾಲಕ ಆಲೆಮಾಡ ಮಂಜುನಾಥ್ ಆಗ್ರಹಿಸಿದ್ದಾರೆ.
-ಹೆಚ್. ಕೆ. ಜಗದೀಶ್