ಕೂಡಿಗೆ, ಫೆ. 10: ಕೂಡಿಗೆ ಸೈನಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಸ್ಕೇಟಿಂಗ್ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಮತ್ತು ಗೋವಾ ವಿಭಾಗದ ಎನ್.ಸಿ.ಸಿ. ಡೆಪ್ಯೂಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ್ ಅವರು ಸ್ಕೇಟಿಂಗ್ ಮೈದಾನ ಉದ್ಘಾಟಿಸಿ ಮಾತನಾಡಿ, ಶಾಲೆಯು ಕೈಗೊಂಡ ಸಮಗ್ರ ಸಾಧನೆಯನ್ನು ಶ್ಲಾಘಿಸಿದರು. ಶಾಲೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ಕೈಗೊಳ್ಳಲು ಸಾಧ್ಯವಾಗಿದೆ. ಈ ಶಾಲೆಯಲ್ಲಿ ಎನ್‍ಸಿಸಿ ಘಟಕವು ಕೈಗೊಂಡಿರುವ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ವಾರ್ಷಿಕ ವರದಿಯ ವಾಚನ ಮಾಡಿ, ಕಳೆದ ವರ್ಷ ಕೈಗೊಂಡ ಹಲವು ಸಾಧನೆಗಳನ್ನು ಮತ್ತು ಚಟುವಟಿಕೆಗಳನ್ನು ಸಮಗ್ರವಾಗಿ ತಿಳಿಸಿಕೊಟ್ಟರು. ಶಾಲೆಯಿಂದ ಎನ್.ಡಿ.ಎ.ಗೆ ಆಯ್ಕೆಯಾದ 7 ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲೆಯ ಹತ್ತು ಮತ್ತು ಹನ್ನೆರಡನೇ ತರಗತಿಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಜೊತೆಗೆ 2017-18ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಶಾಲೆಯ ಕಠಾರಿ ಸದನಕ್ಕೆ ‘ಚಾಂಪಿಯನ್ ಪಾರಿತೋಷಕ’ವನ್ನು ಪ್ರದಾನ ಮಾಡಿದರು. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಾಲೆಯ ಉಪ ಪ್ರಾಂಶುಪಾಲೆ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಡಿ. ಮ್ಯಾಥ್ಯು, ವೈದ್ಯಾಧಿಕಾರಿ ಡಾ. ಮಹೇಶ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕೆಡೆಟ್‍ಗಳಾದ ಭರತ್, ಲವಿನ್ ಬೋಪಣ್ಣ, ಶ್ರೀಹಿತ್ ಹಾಗೂ ದೇವಯ್ಯ ನಿರ್ವಹಿಸಿದರು.