ಆಪರೇಷನ್ ಆಡಿಯೋ: ಎಸ್‍ಐಟಿ ತನಿಖೆ

ಬೆಂಗಳೂರು, ಫೆ. 11: ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ತಾವೇ ಬಿಡುಗಡೆ ಮಾಡಿದ್ದ “ಆಪರೇಷನ್ ಕಮಲ” ಆಡಿಯೋ ಕುರಿತು ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮಾವರ ಘೋಷಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಆಪರೇಷನ್ ಕಮಲ ಆಡಿಯೋ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು, ತಮ್ಮ ಮೇಲೆ ಮಾಡಿರುವ ಆಪಾದನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ತಮ್ಮ ನಡೆ ಬಗ್ಗೆ ಸದನಕ್ಕೆ ಶಾಸಕರಲ್ಲಿಯೇ ಪ್ರಶ್ನಿಸಿದರು. ಇನ್ನು ಈ ಕುರಿತು ಸಮಗ್ರ ತನಿಖೆಯಾಗಬೇಕು. ಸ್ಪೀಕರ್ ಕುರಿತು ಹಗುರವಾಗಿ ಮಾತನಾಡಿರುವರಿಗೆ ಒಂದು ಪಾಠವಾಗಬೇಕು ಎಂದು ಶಾಸಕರು ಆಗ್ರಹಿಸಿದರು. ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿಯೋ ಕುರಿತು ಐವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆ ಮಾಡಿ, 15 ದಿನದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಸಭಾಧ್ಯಕ್ಷರ ಸೂಚನೆ ಮೇರೆಗೆ ತನಿಖಾ ತಂಡ ರಚಿಸಿ, ತನಿಖೆ ನಡೆಸಲಾಗುವದು ಎಂದರು.

ಎಸ್‍ಐಟಿ ತನಿಖೆಗೆ ಬಿಜೆಪಿ ವಿರೋಧ

ಬೆಂಗಳೂರು, ಫೆ. 11: ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆಯಂತೆ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಅವರು ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಯನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ಎಸ್ ಐಟಿ ತನಿಖೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಪಕ್ಷ ಬಿಜೆಪಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸೋಮವಾರ ಒತ್ತಾಯಿಸಿದೆ. ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಸಮಾವೇಶಗೊಂಡಾಗ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಸ್ಪೀಕರ್ ರೂಲಿಂಗ್ ಮರು ಪರಿಶೀಲಿಸುವಂತೆ ಒತ್ತಾಯಿಸಿದರು. ಆದರೆ ಸಚಿವರು ಮತ್ತು ಸಭಾಧ್ಯಕ್ಷ ರಮೇಶ್ ಕುಮಾರ್ ಸರ್ಕಾರದ ಮಟ್ಟದಲ್ಲೇ ತನಿಖೆ ನಡೆಯಲಿ ಎಂದು ಪಟ್ಟು ಹಿಡಿದರು. ಈ ವಿಚಾರದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವರು, ಶಾಸಕರು ಮತ್ತು ಬಿಜೆಪಿ ಶಾಸಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ವಾದ ಪ್ರತಿವಾದದ ನಂತರ ಸಭಾಧ್ಯಕ್ಷ ರಮೇಶ್ ಕುಮಾರ್ ಈ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಅಂತಿಮವಾಗಿ ಇದೀಗ ಸರ್ಕಾರದ ಮಟ್ಟದಲ್ಲೇ ತನಿಖೆ ನಡೆಯಬೇಕು ಎನ್ನುವ ನಿಲುವಿಗೆ ಸ್ಪೀಕರ್ ಅಂಟಿಕೊಂಡರು. ಮಾಧುಸ್ವಾಮಿಗೆ ಬಿಜೆಪಿಯ ಇತರೆ ಶಾಸಕರು ಧ್ವನಿಗೂಡಿಸಿದರು. ಎಸ್‍ಐಟಿ ತನಿಖೆ ಬೇಡ. ಸದನ ಸಮಿತಿ ರಚಿಸಿ ತನಿಖೆ ನಡೆಸಿ ಎಂದು ಒಕ್ಕೊರಲಿನಿಂದ ಬಿಜೆಪಿ ಸದಸ್ಯರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಆಗ್ರಹಿಸಿದರು.

ಬಿಎಸ್‍ವೈ ವಿರುದ್ಧ ದೂರು ದಾಖಲು

ಬೆಂಗಳೂರು, ಫೆ. 11: ಆಪರೇಷನ್ ಕಮಲ ಕಾರ್ಯಾರಚರಣೆ ನಡೆಸಿ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮೀಷ ಒಡ್ಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಎಸಿಬಿಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು, ಜೆಡಿಎಸ್ ಶಾಸಕರಿಗೆ ಯಡಿಯೂರಪ್ಪ ಅವರು 10 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಎಂಬುವರು ಸಹ ಯಡಿಯೂರಪ್ಪ ಅವರ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಯಡಿಯೂರಪ್ಪ ಪ್ರಜಾತಂತ್ರ ವ್ಯವಸ್ಥೆಯನ್ನು ಹಾಳು ಮಾಡಲು ವಾಮಮಾರ್ಗ ಹಿಡಿದಿದ್ದಾರೆ. ಕೋಟಿ ಕೋಟಿ ಹಣದ ಆಮಿಷವೊಡ್ಡಿ ಭ್ರಷ್ಟಾಚಾರ ಮಾಡುತ್ತಿದ್ಧಾರೆ. ಹೀಗಾಗಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಹನುಮೇಗೌಡ ಎಸಿಬಿಗೆ ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ದಿನೇಶ್ ಕಲ್ಲಹಳ್ಳಿ ಮನವಿ ನೀಡಿದ್ದಾರೆ. ಜೊತೆಗೆ ನಾಗನಗೌಡ, ಶಿವನಗೌಡ ನಾಯಕ್ ವಿರುದ್ಧವೂ ಸಹ ದೂರು ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ ಆಡಿಯೋ ಪ್ರತಿಧ್ವನಿ

ನವದೆಹಲಿ, ಫೆ. 11: ಕರ್ನಾಟಕದ ರಾಜಕೀಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಆಪರೇಷನ್ ಕಮಲದ ವಿಚಾರ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು. ಆಡಿಯೋ ಟೇಪ್ ವಿಚಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು ಆಡಳಿತಾರೂಢ ಸಮ್ಮಿಶ್ರದ ಸರ್ಕಾರದ ಶಾಸಕರನ್ನು ಖರೀದಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ, ಈ ಆರೋಪವನ್ನು ಕೇಂದ್ರ ಸಚಿವ ಸದಾನಂದಗೌಡ ನಿರಾಕರಿಸಿದರು. ಈ ವಿಚಾರದಿಂದಾಗಿ ಸೋನಿಯಾಗಾಂಧಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸ್ವಲ್ಪ ಕಾಲ ಸಭಾತ್ಯಾಗ ನಡೆಸಿದರು. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸದನಕ್ಕೆ ಆಗಮಿಸಿದರು. ಶೂನ್ಯ ವೇಳೆಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಆಡಿಯೋ ಕ್ಲಿಪ್ ಬಗ್ಗೆ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರೇ ಕುದುರೆ ವ್ಯಾಪಾರಕ್ಕಿಳಿದಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಆಡಿಯೋ ಟೇಪ್‍ನಲ್ಲಿ ರಾಜ್ಯದಲ್ಲಿನ ಸ್ಪೀಕರ್ ಹಾಗೂ ಜಡ್ಜ್ ಅವರನ್ನು ನಿರ್ವಹಿಸುವದಾಗಿ ಹೇಳಿರುವ ಅಂಶವಿದೆ ಎಂದು ಹೇಳಿದರು. ಖರ್ಗೆ ಅವರ ಹೇಳಿಕೆಗೆ ಸಚಿವ ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿಯ ಆಪರೇಷನ್ ಕಮಲ ದೇಶದಲ್ಲಿ ನಡೆಯಬಾರದು ಎಂದು ಹೇಳಿದರು.

ಯುಪಿಯಲ್ಲಿ ಪ್ರಿಯಾಂಕಾ ರೋಡ್ ಶೋ

ಲಖನೌ, ಫೆ. 11: ಇತ್ತೀಚಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪೂರ್ವ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಉತ್ತರ ಪ್ರದೇಶದ ರಾಜಧಾನಿಯಲ್ಲಿ ರೋಡ್ ಶೋ ನಡೆಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಉಸ್ತುವಾರಿ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಐಸಿಸಿಸಿ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಪಶ್ಚಿಮ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಡೆಸಿದ ರೋಡ್ ಶೋನಲ್ಲಿ ಭಾರೀ ಜನಸ್ತೋಮ ಕಂಡುಬಂದಿತು. ಸುಮಾರು 25 ಕಿಲೋ ಮೀಟರ್ ದೂರದವರೆಗೂ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ರಾಹುಲ್, ರಾಹುಲ್ ಎಂಬ ಜಯ ಘೋಷ ಮೊಳಗಿಸುತ್ತಿದ್ದರು. ಅಲ್ಲದೇ ಈ ಮೂವರನ್ನು ಸೆಲ್ಪಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಈ ರೋಡೋ ಶೋ ವಿಡಿಯೋವನ್ನು ಎಐಸಿಸಿ ಟ್ವೀಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡರಾದ ರಾಜ್ ಬಬ್ಬರ್, ಆರ್ ಪಿಎನ್ ಸಿಂಗ್, ಹರೀಶ್ ರಾವತ್, ರಾಜೀವ್ ಶುಕ್ಲಾ ಮತ್ತಿತರರು ಪಾಲ್ಗೊಂಡಿದ್ದರು. ರೋಡ್ ಶೋನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮೋದಿ ಹಣವನ್ನು ಲೂಟಿ ಹೊಡೆದಿದ್ದು, ಚೌಕಿದಾರ್ ಚೋರ್ ಹೈ ಎಂದು ಆರೋಪಿಸಿದರು.