ಮಡಿಕೇರಿ, ಫೆ.11: ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಗಾಳಿಬೀಡು ಗ್ರಾ.ಪಂ.ಉಪಾಧ್ಯಕ್ಷೆ ರಾಣಿ ಮುತ್ತಣ್ಣ ಚಾಲನೆ ನೀಡಿದರು.
ಜಂತುಹುಳು ಮಾತ್ರೆ ಸೇವನೆಯಿಂದ ರಕ್ತ ಹೀನತೆ ದೂರವಾಗುತ್ತದೆ. ಆದ್ದರಿಂದ ಜಂತುಹುಳು ನಿವಾರಕ ಮಾತ್ರೆ ಸೇವಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎನ್.ಆನಂದ್ ಮಾತನಾಡಿ ಅಪೌಷ್ಠಿಕತೆ ನಿರ್ಮೂಲನೆ, ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಜಂತುಹುಳು ನಿವಾರಣೆ ಮಾಡುವ ಅಗತ್ಯವಿದೆ. ಹಾಗಾಗಿ ಆರು ತಿಂಗಳಿಗೊಮ್ಮೆ 1 ವರ್ಷದಿಂದ 19 ವಯಸ್ಸಿನವರೆಗೆ ಎಲ್ಲಾ ಮಕ್ಕಳಿಗೆ, ಶಾಲಾ/ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಮಾತ್ರೆ ನೀಡಲಾಗುವದು. ಸರ್ವರೂ ಇದರ ಪ್ರಯೋಜನ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ, ಡಾ.ಎ.ಸಿ.ಶಿವಕುಮಾರ್, ಮುಖ್ಯೋಪಾಧ್ಯಾಯಿನಿ ಕಾವೇರಿ, ವಿಷಯ ಪರಿವೀಕ್ಷಕರಾದ ಕಾತ್ಯಾಯಿನಿ, ಸಿಆರ್‍ಪಿ ಸರಸ್ವತಿ, ಶಾಲೆಯ ಶಿಕ್ಷಕರು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂಬಂಧ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಸ್ವಾಗತಿಸಿ, ವಂದಿಸಿದರು.