ಮಡಿಕೇರಿ,ಫೆ.11: ಕೊಡಗು ಜಿಲ್ಲಾ ಇಂಡಿಯನ್ ಡೆಂಟಲ್ ಅಸೋಷಿ ಯೇಷನ್ ವತಿಯಿಂದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಒಟ್ಟು 14 ಮಂದಿಗೆ 1.20 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.

ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ನೆರವಿನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಐ.ಡಿ.ಎ.ನ ಜಿಲ್ಲಾ ಅಧ್ಯಕ್ಷ ಡಾ. ಪೊನ್ನಪ್ಪ, ಕೊಡಗು ಜಿಲ್ಲೆಯಲ್ಲಿ ದುರದೃಷ್ಟವಶಾತ್ ಪ್ರಕೃತಿ ವಿಕೋಪ ಸಂಭವಿಸಿದೆ. ಇಂತಹ ದುರಂತ ನಡೆಯಬಹುದೆಂದು ಯಾರೂ ಕೂಡ ಊಹಿಸಿರಲಿಲ್ಲ. ಹಲವು ಮಂದಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿದ್ದು ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸರಕಾರಗಳು ಕೂಡ ನೆರವಿನ ಹಸ್ತ ನೀಡಿವೆ. ಐ.ಡಿ.ಎ.ಗೆ ಪ್ರತಿಯೊಬ್ಬ ಸಂತ್ರಸ್ತರಿಗೂ ನೆರವು ನೀಡುವಷ್ಟು ಶಕ್ತಿಯಿಲ್ಲ. ಸಂಸ್ಥೆಯ 80 ಸದಸ್ಯರು ಮತ್ತು ವೀರಾಜಪೇಟೆಯ ಡೆಂಟಲ್ ಕಾಲೇಜಿನ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಈ ನೆರವುಗಳನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಹೊಸ ಬದುಕು ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮತ್ತೆಂದೂ ಇಂತಹ ದುರಂತಗಳು ಸಂಭವಿಸದಿರಲಿ ಎಂದು ಡಾ. ಪೊನ್ನಪ್ಪ ಆಶಿಸಿದರು.

ಡಾ. ಶಶಿಕಾಂತ್ ರೈ ಮಾತನಾಡಿ, ಪ್ರಕೃತಿ ವಿಕೋಪ ಹಲವು ಮಂದಿಯ ಬದುಕನ್ನು ನಾಶಮಾಡಿದೆ. ತೋಟ, ಗದ್ದೆ, ಮನೆಗಳನ್ನು ಕಳೆದುಕೊಂಡು ಬೀದಿಪಾಲಾದವರ ನೋವನ್ನು ಮರೆಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ಮೂಲೆಗಳಿಂದ ದಾನಿಗಳು ನೆರವನ್ನು ನೀಡಿದ್ದು ಅವರನ್ನೂ ಕೂಡ ಸ್ಮರಿಸಬೇಕು. ಅದೂ ಕೂಡ ನಮ್ಮ ಕರ್ತವ್ಯ ಎಂದು ಹೇಳಿದರು. ಸಂತ್ರಸ್ತರು ವಿವಿಧ ರೂಪದ ನೆರವುಗಳನ್ನು ಪಡೆದುಕೊಂಡು ಹೊಸ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಡಾ.ಬೋಪಣ್ಣ ಮಾತನಾಡಿ, ಪ್ರಕೃತಿ ವಿಕೋಪ ಸಂತ್ರಸ್ತರ ಬದುಕಿನಲ್ಲಿ ಬದಲಾವಣೆಯನ್ನು ತಂದಿದೆ. ಈ ಬದಲಾವಣೆಗೆ ದೃತಿಗೆಡದೆ ಹೊಸ ರೀತಿಯ ಜೀವನ ಶೈಲಿಯನ್ನು ಅನಿವಾರ್ಯವಾಗಿ ಮೈಗೂಡಿಸಿ ಕೊಳ್ಳಬೇಕಿದೆ. ತೋಟ, ಗದ್ದೆ, ಮನೆ, ಸ್ಥಿರಾಸ್ತಿಗಳು ಯಾವದು ಶಾಶ್ವತವಲ್ಲ. ಅದು ಕೂಡ ಪ್ರಕೃತಿಯ ಒಂದು ಭಾಗವೇ ಆಗಿದ್ದು, ಪ್ರಕೃತಿ ಅದನ್ನು ಮರಳಿ ಪಡೆದಿದೆ ಎಂದು ತಿಳಿದು ಹೊಸ ದುಡಿಮೆಯ ತುಡಿತದೊಂದಿಗೆ ಬದುಕು ಸಾಗಿಸಬೇಕೆಂದು ಸಲಹೆ ನೀಡಿದರು.

ಬಳಿಕ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ಮತ್ತು ಬಟ್ಟೆಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಡಾ. ಕೃಪಾಶಂಕರ್, ಡಾ. ರದೀಷ್, ಡಾ.ರಾಮ್ ಉಪಸ್ಥಿತರಿದ್ದರು.