ಮಡಿಕೇರಿ, ಫೆ. 11: ಭಾರತೀಯ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಲಿದಾನ ದಿನವನ್ನು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸುವದರೊಂದಿಗೆ, ಅವರ ಬಲಿದಾನವನ್ನು ಸ್ಮರಿಸಲಾಯಿತು. ಪಕ್ಷದ ಕಚೇರಿಯಲ್ಲಿ ಪಂಡಿತ್ ದೀನದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಸಂಸ್ಮರಣೆ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡುತ್ತಾ, ಪಂಡಿತ್ ದೀನದಯಾಳ್ ಅವರು, ಏಕಾತ್ಮ ಮಾನವತಾವಾದದೊಂದಿಗೆ ಶೋಷಿತರು, ದೀನದಲಿತರ ಸಹಿತ ಮನುಕುಲಕ್ಕೆ ಸಮಾನತೆ ಬೋಧಿಸಿದ್ದರು. ಅಂತಹ ದೀಮಂತ ನಾಯಕನ ನಿಗೂಢ ಹತ್ಯೆಯಿಂದ ಭಾರತದ ರಾಜಕಾರಣದ ದಿಕ್ಕು ಬಡವಾಯಿತೆಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಕಾರ್ಯದರ್ಶಿ ಅಪ್ಪಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಬಿ.ಕೆ. ಅರುಣ್‍ಕುಮಾರ್, ಜಗದೀಶ್, ಮನು ಮಂಜುನಾಥ್, ಉಮೇಶ್ ಸುಬ್ರಮಣಿ ಮೊದಲಾದವರು ಪಾಲ್ಗೊಂಡಿದ್ದರು.