ಕುಶಾಲನಗರ, ಫೆ. 11: ಮನೆಗೊಬ್ಬರಂತೆ ಹೋರಾಟದಲ್ಲಿ ಪಾಲ್ಗೊಂಡು ತಾಲೂಕು ಪಡೆದುಕೊಳ್ಳುವ ಮನಸ್ಥಿತಿಗೆ ಪಟ್ಟಣದ ಜನತೆ ಮುಂದಾದಲ್ಲಿ ಮಾತ್ರ ತಾಲೂಕು ರಚನೆ ಗುರಿ ಹೊಂದಲು ಸಾಧ್ಯ ಎಂದು ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ತಾಲೂಕು ಘೋಷಣೆಗೆ ಆಗ್ರಹಿಸಿ ನಡೆದ ಕುಶಾಲನಗರ ಬಂದ್ ಕಾರ್ಯಕ್ರಮದ ಅಂಗವಾಗಿ ಕಾರು ನಿಲ್ದಾಣದ ಆವರಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಶಾಲನಗರಕ್ಕೆ ಉಂಟಾಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಹೋರಾಟದ ಮನಸ್ಥಿತಿ ಹೊಂದಬೇಕಾಗಿದೆ.
ರಾಜ್ಯದಲ್ಲಿ ಇದುವರೆಗೆ ಯಾವದೇ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಹೋರಾಟದಷ್ಟು ತೀವ್ರತೆ ಪ್ರದರ್ಶಿಸಿಲ್ಲ. ಆದರೂ ಕೂಡ ಸರಕಾರದಿಂದ ಕುಶಾಲನಗರಕ್ಕೆ ಅನ್ಯಾಯ ಉಂಟಾಗುತ್ತಿದೆ. ಊರಿನ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ಹೋರಾಟ ಕೈಗೊಳ್ಳಲಾಗಿದೆಯೇ ಹೊರತು ಯಾವುದೇ ಸ್ವಾರ್ಥ ಇದರಲ್ಲಿ ಅಡಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊನೆಯ ಪ್ರಯತ್ನವಾಗಿ ಮಂಗಳವಾರ (ಇಂದು) ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ತಾಲೂಕು ಘೋಷಣೆ ಬಗ್ಗೆ ಮನವರಿಕೆ ಮಾಡಲಾಗುವದು. ಈ ಪ್ರಯತ್ನ ಕೂಡ ಕೈಗೂಡದಿದ್ದಲ್ಲಿ ಹೋರಾಟ ಸಮಿತಿಯನ್ನು ಮುಂದುವರೆಸಬೇಕೆ, ವಿಸರ್ಜಿಸಬೇಕೆ ಎಂಬ ನಿರ್ಧಾರ ಕೈಗೊಳ್ಳುವದಾಗಿ ಅವರು ತಿಳಿಸಿದರು.
ಟೀಕೆ-ಧಿಕ್ಕಾರ: ಸಭೆಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಬಗ್ಗೆ ಟೀಕೆ ವ್ಯಕ್ತಪಡಿಸಿದ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿರುವ ಅಮೃತ್‍ರಾಜ್ ಚಂದ್ರಕಲಾ ಅವರಿಗೆ ಧಿಕ್ಕಾರ ಕೂಗಿ ಸಭೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು.
ಶಾಸಕ ಅಪ್ಪಚ್ಚುರಂಜನ್ ತಾಲೂಕು ರಚನೆಗೆ ಯಾವದೇ ರೀತಿಯ ಪ್ರಯತ್ನ ನಡೆಸುತ್ತಿಲ್ಲ ಎಂದು ಚಂದ್ರಕಲಾ ಅವರು ಟೀಕಿಸಿದ ಸಂದರ್ಭ ಕೋಪಗೊಂಡ ಅಮೃತ್‍ರಾಜ್ ಧಿಕ್ಕಾರ ಕೂಗಿದರು. ಈ ಸಂದರ್ಭ ಜೊತೆಗಿದ್ದ ಬಿಜೆಪಿ ಮುಖಂಡರಾದ ಎಂ.ವಿ.ನಾರಾಯಣ ಅವರು ಕೂಡ ಚಂದ್ರಕಲಾ ಅವರ ಟೀಕೆಯನ್ನು ಖಂಡಿಸಿದರು.
ಈ ನಡುವೆ ಬಂದ್‍ಗೆ ಪೊಲೀಸ್ ಇಲಾಖೆಯಿಂದ ಸಾಯಂಕಾಲ 6 ಗಂಟೆವರೆಗೆ ಮಾತ್ರ ಅನುಮತಿ ನೀಡಿದ್ದರೂ ಬಂದ್ ಆಯೋಜಕರು 7 ಗಂಟೆ ತನಕ ಸಭೆ ನಡೆಸಿ ಏಕಾಏಕಿ ಮಾನವ ಸರಪಳಿ ರಚಿಸಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಮಾಡಿದ ಘಟನೆ ಹಿನ್ನಲೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಕೂಡಲೆ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಮುರಳೀಧರ್ ಇದೇ ರೀತಿ ಕಾನೂನು ಉಲ್ಲಂಘನೆ ಮಾಡಿದಲ್ಲಿ ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸುವದಾಗಿ ಎಚ್ಚರಿಕೆ ನೀಡಿದರು.
ಕುಶಾಲನಗರ ಬಂದ್ ಹಿನ್ನಲೆಯಲ್ಲಿ ಯಾವದೇ ಮುನ್ಸೂಚನೆ ನೀಡದೆ ಖಾಸಗಿ ಶಾಲೆಯೊಂದು ಮಕ್ಕಳನ್ನು ಮನೆಗೆ ಹಿಂತಿರುಗಿ ಕಳುಹಿಸಿದ ಬಗ್ಗೆ ಮಕ್ಕಳ ಪೋಷಕರು ಆಕ್ರೋಷ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಸ್ಥಳೀಯ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ಏಕಾಏಕಿ ರಜಾ ಘೋಷಿಸಿದ ಹಿನ್ನಲೆಯಲ್ಲಿ ಶಾಲೆಗೆ ಬಂದ ಮಕ್ಕಳು ಪರದಾಡುವಂತಾಯಿತು ಎಂದು ಮಕ್ಕಳ ಪೋಷಕರು ದೂರಿದ್ದಾರೆ.