ಶನಿವಾರಸಂತೆ, ಫೆ. 11: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೂ ತನ್ನ ಸ್ವಾವಲಂಬಿ ಬದುಕನ್ನು ಕಟ್ಟಿ ಕೊಳ್ಳುತ್ತಿರುವದು ಸಂತೋಷದ ವಿಷಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಹೇಳಿದರು.

ಶನಿವಾರಸಂತೆ ಸಮೀಪದ ಗುಡುಗಳಲೆ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಯ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಹಳ ಹಿಂದೆ ಸ್ತ್ರೀಯರನ್ನು ಸಾಮಾಜಿಕವಾಗಿ ಯಾವ ಕಾರ್ಯಗಳಿಗೂ ಬಳಸಿಕೊಳ್ಳದೆ ಅವರನ್ನು ದೂರ ಉಳಿಯುವಂತೆ ಮಾಡಲಾಗುತಿತ್ತು. ಆದರೆ ಬದಲಾದ ಕಾಲಮಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನ ಛಾಪನ್ನು ಮೂಡಿಸಿ ಹೆಸರು ಮಾಡುತ್ತಿರುವದು ಮಹಿಳೆಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ ಅಂತಹ ಮಹಿಳೆಯರ ಬೆನ್ನೆಲುಬಾಗಿ ಪುರುಷರು ಸಹಕರಿಸಿದ್ದೆ ಆದಲ್ಲಿ ಹೆಣ್ಣಿನ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನುಡಿದರು.

ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ ಸುಮಾರು 20 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಚಾಲನೆ ನೀಡಲಾಯಿತು. ಕೇವಲ ಕೌಟುಂಬಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯು ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ನಿಂತು ಆರ್ಥಿಕವಾಗಿ ಸಬಲರಾಗಲು ರಾಜ್ಯ ಸರ್ಕಾರವು ಶೇಕಡಾ 6ರ ಬಡ್ಡಿ ದರದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಅದನ್ನು ಪ್ರತಿಯೊಬ್ಬ ಮಹಿಳೆಯೂ ಕೂಡ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ರಿಹಾನಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಸ್ತ್ರೀಶಕ್ತಿ ಸಂಘಗಳ ಇತ್ತೀಚಿನ ಯಶಸ್ವಿ ಬೆಳವಣಿಗೆಗೆ ಮೂಲ ಕಾರಣ ಕರ್ತರಾಗಿದ್ದಾರೆ ಎಂದರು. ಮಹಿಳಾ ಮೇಲ್ವಿಚಾರಕಿ ನಿರ್ಮಲ ಮಾತನಾಡಿದರು ಈ ಸಂದರ್ಭ ಗುಡುಗಳಲೆ ಜಾತ್ರಾ ಮಹೋತ್ಸವದ ಅಧ್ಯಕ್ಷ ಶಿವಕುಮಾರ್ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂದೀಪ್. ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಕಾರ್ಯದರ್ಶಿ ಎಚ್.ಎಂ.ಹೇಮ, ತಾಲೂಕು ಸ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಉಪಾಧ್ಯಕ್ಷೆ ಯಶೋಧ ಸೇರಿದಂತೆ ಇನ್ನಿತರರು ಹಾಜರಿದ್ದರು ಈ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ತಾಲೂಕಿನ ವಿವಿಧ ಮೂವತ್ತಕ್ಕೂ ಅಧಿಕ ಸ್ತ್ರೀ ಶಕ್ತಿ ಗುಂಪುಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಟ್ಟಿದ್ದರು.