ಕುಶಾಲನಗರ, ಫೆ. 11: ಮಾದಕ ಪದಾರ್ಥಗಳ ಬಳಕೆ ಮೂಲಕ ಮನುಷ್ಯನ ಆರೋಗ್ಯ ವಿನಾಶದತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕೆಂದು ಸೋಮವಾರಪೇಟೆ ತಾಲೂಕಿನ ಉಪ ವಿಭಾಗದ ಡಿವೈಎಸ್ಪಿ ಪಿ.ಕೆ.ಮುರಳಿಧರ್ ಕರೆ ನೀಡಿದರು.

ಹೋಬಳಿಯ ಚಿಕ್ಕ ಅಳುವಾರ ದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ಮಹಿಳಾ ಕೋಶ, ಸ್ಪರ್ಷ್ ಕೋಶ ಹಾಗೂ ಸೋಮವಾರಪೇಟೆ ತಾಲೂಕಿನ ಪೊಲೀಸ್ ಉಪ ವಿಭಾಗದ ಸಹಯೋಗದಲ್ಲಿ ಜರುಗಿದ 'ಮಾದಕ ವಸ್ತು, ರಸ್ತೆ ಸುರಕ್ಷತೆ, ಸೈಬರ್ ಕ್ರೈಂ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಹಕ್ಕುಗಳು' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದಿನನಿತ್ಯ ಒತ್ತಡದ ಕೆಲಸ ನಿರ್ವಹಿಸುವ ಬಹುತೇಕ ಮಂದಿ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡು ಮಾದಕ ವ್ಯಸನಗಳಿಗೆ ಬಲಿಯಾಗುತ್ತಾರೆ. ಈ ಮೂಲಕ ಅನಾರೋಗ್ಯ ಕಾಡುವದರೊಂದಿಗೆ ಅಪಾಯಕ್ಕೆ ತುತ್ತಾಗುತ್ತಾರೆ ಎಂದರು.

ಪ್ರತಿಯೊಬ್ಬರೂ ಯೋಗಾಸನ, ವ್ಯಾಯಾಮ, ಪ್ರಾಣಾಯಾಮಗಳಂತಹ ಅಭ್ಯಾಸಗಳನ್ನು ಮೈಗೂಡಿಸಿ ಕೊಳ್ಳಬೇಕೇ ಹೊರತು ಮಾದಕ ವ್ಯಸನಿಗಳಾಗಬಾರದು ಎಂದು ಕಿವಿಮಾತು ಹೇಳಿದರು. ರಸ್ತೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಂಚಾರಿ ಠಾಣೆಯ ಆರಕ್ಷಕ ಉಪನಿರೀಕ್ಷಕ ಪಿ.ಪಿ.ಸೋಮೇಗೌಡ ಮಾತನಾಡಿ, ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು. ವಾಹನ ಚಾಲನೆ ಮಾಡುವ ವೇಳೆ ಸಂಚಾರಿ ಕಾನೂನುಗಳನ್ನು ತಿಳಿಯುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರು ಹಾಗೂ ಸ್ಪರ್ಷ್ ಕೋಶ ಸಂಯೋಜ ಕರು ಆದ ಪ್ರೊ. ಮಂಜುಳಾ ಶಾಂತರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ಕೋಶದ ಸಂಯೋಜಕಿ ಡಾ.ಐ.ಕೆ.ಮಂಜುಳಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಶಾಲನಗರ ಗ್ರಾಮಾಂತರ ಠಾಣೆಯ ಆರಕ್ಷಕ ಉಪನಿರೀಕ್ಷಕ ನಂದೀಶ್, ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಸಿ.ಪುಷ್ಪಲತಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಕೆ.ಕೆ.ಧರ್ಮಪ್ಪ, ಎಸ್ಸಿ/ಎಸ್ಟಿ ಸೆಲ್‍ನ ಸಂಯೋಜಕ ಡಾ.ರಾಜಕುಮಾರ್ ಮೇಟಿ, ಸಹಾಯಕ ಗ್ರಂಥಪಾಲಕ ಹರೀಶ್, ಉಪನ್ಯಾಸಕ ಜಮೀರ್ ಅಹಮದ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ವೃಂದ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿ ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸೋಮವಾರಪೇಟೆ ತಾಲೂಕಿನ ಉಪ ವಿಭಾಗದ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.