ಮಡಿಕೇರಿ, ಫೆ. 10: ಭಾರತದ ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ಡಾಕ್ಟರ್ ಕೇಶವಬಲಿರಾಂ ಹೆಡ್ಗೆವಾರ್ ಆರಂಭಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ವ್ಯಾಪಕವಾಗಿ ತನ್ನ ಶಾಖೆಗಳ ಮೂಲಕ ವ್ಯಕ್ತಿತ್ವ ನಿರ್ಮಾಣದೊಂದಿಗೆ ರಾಷ್ಟ್ರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಿದೆ ಎಂದು ನಿವೃತ್ತ ಮೇಜರ್ ಎಸ್.ಕೆ. ವೆಂಕಟಗಿರಿ ಶ್ಲಾಘನೀಯ ನುಡಿಯಾಡಿದರು. ಸಂಘದ ಜಿಲ್ಲಾ ಘಟಕದಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಶಾರೀರಿಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಭಾರತದ ಇಂದಿನ ರಾಷ್ಟ್ರಪತಿ ರಾಂನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸಹಿತ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರು ದೇಶದ ಮಹತ್ವದಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತಿರುವದು ಪ್ರಶಂಸನೀಯ ವೆಂದ ವೆಂಕಟಗಿರಿ, ಆರೆಸ್ಸೆಸ್ ಸಂಸ್ಥಾಪಕರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸುವಂತೆ ಕರೆ ನೀಡಿದರು.

ಸ್ವಾತಂತ್ರ್ಯವೀರ ಸಾವರ್‍ಕರ್ ಅವರಂತಹ ದೇಶಭಕ್ತರ ಸ್ಫೂರ್ತಿ ಯಿಂದ 1925ರಲ್ಲಿ ಪ್ರಾರಂಭ ಗೊಂಡಿರುವ ಆರೆಸ್ಸೆಸ್ ಇಂದು ನಿತ್ಯ ಶಾಖೆಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ದೊಂದಿಗೆ ಯುವ ಜನಾಂಗದಲ್ಲಿ ದೇಶಭಕ್ತಿ

(ಮೊದಲ ಪುಟದಿಂದ) ಮೂಡಿಸುತ್ತಾ, ರಾಷ್ಟ್ರ ನಿರ್ಮಾಣ ಮತ್ತು ದೇಶಕ್ಕೆ ಎದುರಾಗುವ ಕಷ್ಟಗಳ ಸಂದರ್ಭ ಸೇವಾ ನಿರತರಾಗುವಂತೆ ಸ್ಪೂರ್ತಿ ತುಂಬುತ್ತಿದೆ ಎಂದು ಉಲ್ಲೇಖಿಸಿದರು.

ಕೊಡಗಿನಲ್ಲಿ ಎದುರಾದ ಪ್ರಾಕೃತಿಕ ವಿಕೋಪ ಸೇರಿದಂತೆ ಈ ಹಿಂದೆ ದೇಶದ ವಿವಿಧೆಡೆಗಳಲ್ಲಿ ಸಂಭವಿಸಿದ ಭೂಕಂಪ, ಜಲಪ್ರಳಯ, ಅನಿಲ ದುರಂತದ ಸಂದರ್ಭಗಳಲ್ಲಿ ಸ್ವಯಂ ಸೇವಕರು ನಡೆಸಿರುವ ಸೇವಾಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ನಿವೃತ್ತ ಸೈನ್ಯಾಧಿಕಾರಿ ವ್ಯಾಖ್ಯಾನಿಸಿದರು. ಮಾಜೀ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿತ ಇಂದು ಸಂಘಕಾರ್ಯವನ್ನು ಎಲ್ಲರೂ ಪ್ರಶಂಸಿಸುವಂತಾಗಿದೆ ಎಂದು ನೆನಪಿಸಿದರು.

ಶಾಖೆಯಲ್ಲೇ ಸಂಸ್ಕಾರ: ಸಂಘದ ಮಂಗಳೂರು ವಿಭಾಗ ಶಾರೀರಿಕ ಪ್ರಮುಖ ಸುಭಾಷ್ ಕಳಂಜೆ ಶಾರೀರಿಕ ಪ್ರದರ್ಶನ ಕುರಿತು ಮಾತನಾಡುತ್ತಾ, ನಿತ್ಯ ಸ್ವಯಂ ಸೇವಕರು ಆಟಗಳ ಮೂಲಕ ದೇಶಭಕ್ತಿಯೊಂದಿಗೆ ಸಂಸ್ಕಾರ ಪಡೆಯುತ್ತಾರೆ ಎಂದು ನೆನಪಿಸಿದರು. ಎಲ್ಲಿಯೂ ಸ್ವಾರ್ಥ ಬಯಸದೆ ಶಾರೀರಿಕ, ಮಾನಸಿಕ, ಬೌದ್ಧಿಕ ಶಿಕ್ಷಣದಿಂದ ವಿಶ್ವವನ್ನೇ ಜಯಿಸುವಂತಹ ಭೀಮ- ಹನುಮರ ಶಕ್ತಿಗಾಗಿ ಸಂಕಲ್ಪ ತೊಡುವರೆಂದು ಬಣ್ಣಿಸಿದರು. ರಾಷ್ಟ್ರೀಯ ಕಾಯಕವನ್ನೇ ಈಶ್ವರೀಯ ಕಾರ್ಯವೆಂದು ನಿರಂತರ ಪ್ರಯತ್ನಶೀಲರಾಗಿರುವ ಸಂಘ ಕಾರ್ಯದಲ್ಲಿ ಸಮಾಜವು ಕೈಜೋಡಿಸುವಂತೆ ಅವರು ಸಲಹೆ ನೀಡಿದರು.

ಶಾರೀರಿಕ ಪ್ರದರ್ಶನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿ ಸ್ವಯಂ ಸೇವಕರಿಂದ ಶಾರೀರಿಕ ಪ್ರದರ್ಶನ ಸಾಮೂಹಿಕವಾಗಿ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಹಿರಿಯ ಮತ್ತು ಕಿರಿಯ ಸ್ವಯಂ ಸೇವಕರು ನಿತ್ಯ ಶಾಖೆಗಳಲ್ಲಿ ಅಭ್ಯಸಿಸುವ ವಿಭಿನ್ನ ಪ್ರದರ್ಶನಗಳನ್ನು ನಡೆಸಿದರು.

ಸಂಘದ ಘೋಷ್ ಪ್ರದರ್ಶನ ಸಹಿತ ಪದವಿನ್ಯಾಸ, ದಂಡಕಲೆ, ಯೋಗ, ಸೂರ್ಯ ನಮಸ್ಕಾರ, ಸಂಚಲನ ಇತ್ಯಾದಿಯೊಂದಿಗೆ ದೇಶೀಯ ಆಟಗಳಿಂದ ಸ್ವಯಂ ಸೇವಕರು ಏಕತಾಭಾವ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯವಾಹ ಕೆ.ಕೆ. ದಿನೇಶ್ ಕುಮಾರ್ ಸ್ವಾಗತಿಸಿ, ಪ್ರಚಾರ ಪ್ರಮುಖ್ ಚಂದ್ರ ಉಡೋತ್ ನಿರೂಪಣೆಯೊಂದಿಗೆ, ಸಹಕಾರ್ಯವಾಹ ಡಿ.ಕೆ. ಡಾಲಿ ವಂದಿಸಿದರು.