ಗೋಣಿಕೊಪ್ಪಲು, ಫೆ. 10: ರಾಷ್ಟ್ರೀಯ ಹೆದ್ದಾರಿ ನಿಧಿಯಿಂದ (ಸಿ.ಆರ್.ಎಫ್) ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ಮುಖ್ಯ ರಸ್ತೆಯನ್ನು ಮೇಲ್ಧರ್ಜೆಗೇರಿಸುವ ನಿಟ್ಟಿನಲ್ಲಿ ರೂ. 5 ಕೋಟಿ ಅನುದಾನ ಬಿಡುಗಡೆಗೊಂಡಿದೆ. ರಸ್ತೆಯು ಸುಮಾರು ಐದೂವರೆ (5.50) ಮೀಟರ್ ಅಗಲ ಹಾಗೂ ಅಂದಾಜು 8 ಕಿ.ಮೀ. ಉದ್ದವಿದ್ದು ಅರಕಲ ಗೋಡುವಿನ ಗುತ್ತಿಗೆದಾರ ಎಂ.ಟಿ. ನಾಗರಾಜ್ ಟೆಂಡರ್ ಪ್ರಕ್ರಿಯೆ ಮೂಲಕ ಕಾಮಗಾರಿ ಕೈಗೆತ್ತಿಕೊಂಡಿ ದ್ದಾರೆ.
ಉದ್ಧೇಶಿತ ರಸ್ತೆಯ ಮೇಲ್ವೀ ಚಾರಣೆಯನ್ನು ಲೋಕೋಪ ಯೊಗಿ ಇಲಾಖೆ ವಹಿಸಿಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಭಾಗದ ಅಧಿಕಾರಿಗಳು ಉಸ್ತುವಾರಿ ವಹಿಸಲಿದ್ದು, ಈ ಹಿಂದೆ ಗೋಣಿ ಕೊಪ್ಪಲು ಮುಖ್ಯ ರಸ್ತೆ ರೂ. 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಂತೆ ಇದೂ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಲಿದೆ. ಈಗಾಗಲೇ ನಬಾರ್ಡ್ ಅನುದಾನದಲ್ಲಿ ಅಮ್ಮತ್ತಿ-ಗೋಣಿ ಕೊಪ್ಪಲು ಮಾರ್ಗ ಎರಡು ಸೇತುವೆ ಕಾಮಗಾರಿ ಪೂರ್ಣ ಗೊಂಡಿದ್ದು, ಕಾರೆಕಾಡುವಿನಲ್ಲಿ ಕಿರಿದಾದ ತಿರುವಿನಲ್ಲಿರುವ ಸೇತುವೆ ಯೂ ನೂತನ ಸೇತುವೆಯಾಗಿ ಪರಿವರ್ತನೆಯಾಗಲಿದೆ.
ಉದ್ಧೇಶಿತ ರಸ್ತೆಯು ಅಮ್ಮತ್ತಿ-ಗೋಣಿಕೊಪ್ಪಲು ಜಂಕ್ಷನ್‍ನಿಂದ ಹೊಸೂರು ಗ್ರಾಮದ ಮಾಜಿ ಮುಖ್ಯಮಂತ್ರಿ ದಿ. ಸಿ.ಎಂ. ಪೂಣಚ್ಚ ಮನೆ ಸಮೀಪದವರೆಗೆ ಅಗಲೀಕರಣ ಗೊಳ್ಳಲಿದೆ. ಇದೇ ರಸ್ತೆಗೆ ಅಮ್ಮತ್ತಿ ನಾಡಿನ ಹಿರಿಯರ ಕೇಂದ್ರದ ವತಿಯಿಂದ 2017 ರಲ್ಲಿ 29 ಗ್ರಾಮದ ಜನತೆಯನ್ನು ಸೇರಿಸಿ ‘ಪಂದ್ಯಂಡ ಬೆಳ್ಯಪ್ಪ ರಸ್ತೆ’ ಎಂದು ನಾಮಕರಣ ಮಾಡಿರುವದಾಗಿ ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ತಿಳಿಸಿದ್ದಾರೆ. ‘ಕೊಡಗಿನ ಗಾಂಧಿ’ ಖ್ಯಾತಿಯ ಪಂದ್ಯಂಡ ಬೆಳ್ಯಪ್ಪ ಹೊಸೂರುವಿನವರಾಗಿದ್ದು, ಇದೇ ರಸ್ತೆಯಲ್ಲಿ ನಡೆದಾಡುತ್ತಿದ್ದರು ಮತ್ತು ಕೊಡಗು ‘ಸಿ’ ರಾಜ್ಯದಲ್ಲಿ ಮಂತ್ರಿ ಗಳಾಗಿದ್ದ ಹಿನ್ನೆಲೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸೂರು-ಕೈಕೇರಿ ರಸ್ತೆ ಅಗಲೀಕರಣಗೊಳ್ಳಲಿ
ಅಮ್ಮತ್ತಿಯಿಂದ ಗೋಣಿಕೊಪ್ಪಲ ನ್ನು ಸಂಪರ್ಕಿಸಲು ಹೊಸೂರು-ಗೋಣಿಕೊಪ್ಪಲು ‘ಕಿತ್ತಳೆ ಬೆಳೆಗಾರರ ಸಂಘ’ ಮಾರ್ಗದ ರಸ್ತೆ ಹಾಗೂ ಹೊಸೂರು-ಕೈಕೇರಿ ಮಾರ್ಗದ ಜಿ.ಪಂ. ರಸ್ತೆಯನ್ನು ಹೆಚ್ಚಿನ ಪ್ರಯಾಣಿಕರು, ವಾಹನ ಮಾಲೀಕರು ಬಳಸುತ್ತಿದ್ದು, ಕೆಲವು ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ಗೋಣಿ ಕೊಪ್ಪಲು-ಕೈಕೇರಿ-ಹೊಸೂರು ಮಾರ್ಗ ಅಮ್ಮತ್ತಿಯತ್ತ ಸಾಗುತ್ತಿದ್ದು, ಇದೇ ರಸ್ತೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹಲವು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗೋಣಿಕೊಪ್ಪಲು-ಹೊಸೂರು-ಅಮ್ಮತ್ತಿ ರಸ್ತೆಯ ಮೇಲೆಯೂ ತೀವೃ ವಾಹನ ದಟ್ಟಣೆ ಇದ್ದು, ಕೊಂಡಂಗೇರಿ-ಮೂರ್ನಾಡು ಮಾರ್ಗ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಹತ್ತಿರದ ರಸ್ತೆ ಎನ್ನಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ಹಾಗೂ ಕಡಿಮೆ ಕಾಲಾವಧಿಯಲ್ಲಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
- ಟಿ.ಎಲ್. ಶ್ರೀನಿವಾಸ್