ಸುಂಟಿಕೊಪ್ಪ, ಫೆ.11: ಸೇವೆ ಮಾಡುವ ಮನಸ್ಸು ಮಾನವನ ಬದುಕು ಸಾರ್ಥಕಗೊಳಿಸುವ ಸಂಕಲ್ಪ ಅಸಕ್ತರಿಗೆ ಅನಾರೋಗ್ಯ ಪೀಡಿತರಿಗೆ ವಿಕಲ ಚೇತನರಿಗೆ ಏನಾದರೂ ಸಹಾಯ ಮಾಡಬೇಕೆಂಬ ತುಡಿತವಿದ್ದರೆ ಇಂಥ ವೃತ್ತಿಯವರೇ ಮಾಡಬೇಕೆಂದೇನು ಇಲ್ಲ. ಯಾರು ಬೇಕಾದರೂ ಮಾಡಬಹುದು!

ಮಾದಾಪುರದ ಸವಿತಾ ಸಮಾಜದ ಸದಸ್ಯ ಫ್ರೆಂಡ್ಸ್ ಮೆನ್ಸ್ ಪಾರ್ಲರ್‍ನ ಮಾಲೀಕ ಎಂ.ಆರ್.ಧರ್ಮೆಂದ್ರ ಆಲಿಯಾಸ್ ಧರ್ಮ ಎಂಬವರು ತಾನು ಕಲಿತ ಕ್ಷೌರಿಕವೃತ್ತಿಯಿಂದ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಸಮಾಜದ ಅಶÀಕ್ತರಿಗೆ, ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಇರುವವರಿಗೆ, ಸ್ವಸ್ಥ ಶಾಲೆಯ ವಿಕಲಚೇತನರಿಗೆ, ಜಾತಿ, ಮತ, ನೋಡದೆ ಉಚಿತವಾಗಿ ಕ್ಷೌರ ಮಾಡುತ್ತಾ ಸಮಾಜ ಸೇವೆಯಲ್ಲಿ ತನ್ನ ಅಳಿಲು ಸೇವೆ ಸಲ್ಲಿಸುತ್ತಿರುವದು ಇತರರಿಗೆ ಮಾದರಿಯಾಗಿದೆ.

ಸಮಾಜದಲ್ಲಿ ಉನ್ನತಹುದ್ದೆ ವಿವಿಧ ವೃತ್ತಿಯಲ್ಲಿ ತೊಡಗಿಸಿ ಕೊಂಡಿರುವವರು ಸ್ವಾರ್ಥ ಚಿಂತನೆಯಲ್ಲೇ ಮುಳುಗಿರುವದು ಕಾಣಬಹುದಾಗಿದೆ. ಸಾಕಷ್ಟು ಹಣ, ಐಶ್ವರ್ಯ, ಸಂಪತ್ತು ಇರುವವರೂ ಅಶÀಕ್ತರ ನೆರವಿಗೆ ಮುಂದೆ ಬರುವದು ವಿರಳವಾಗಿರುವಾಗ ಬಡಕುಟುಂಬದ, ಅದರಲ್ಲೂ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ, ಮಕ್ಕಳೊಂದಿಗೆ ಸಂಸಾರ ನಡೆಸುತ್ತಿರುವ ಧರ್ಮ ಅವರ ಸಮಾಜ ಸೇವೆ ಸ್ತುತ್ಯಾರ್ಹವಾದುದು.

ಈ ಬಗ್ಗೆ ಧರ್ಮ ಅವರನ್ನು ಸಂದರ್ಶಿಸಿ ಮಾತನಾಡಿಸಿದಾಗ ‘ದೇವರು ನನಗೆ ಆರೋಗ್ಯ ಕೊಟ್ಟಿದ್ದಾರೆ; ಕ್ಷೌರಿಕ ವೃತ್ತಿಯಿಂದ ತೃಪ್ತಿಯ ಜೀವನ ಸಾಗಿಸುತ್ತಿದ್ದೇನೆ; ಸಮಾಜದಲ್ಲಿರುವ ಪಾಶ್ರ್ವವಾಯು ಪೀಡಿತರು, ಅನಾರೋಗ್ಯಕ್ಕೊಳಗಾದವರು, ವಿಕಲಚೇತನರಿಗೆ ಏನಾದರೂ ಸಹಾಯ ಮಾಡಬೇಕೆಂಬ ತುಡಿತ ಮೊದಲಿನಿಂದಲೇ ಇತ್ತು. ಹಣ ಸಹಾಯ ಮಾಡಲು ಸಾಧ್ಯ ಇಲ್ಲ; ನನ್ನ ವೃತ್ತಿಯಲ್ಲೇ ಅವರಿಗೆ ಉಚಿತವಾಗಿ ಸೇವೆ ಸಲ್ಲಿಸಲು ಮುಂದಾಗಿದ್ದೇವೆ’ ಎಂದು ಹೇಳುತ್ತಾರೆ.

‘ಸುಂಟಿಕೊಪ್ಪ ‘ಸ್ವಸ್ಥ’ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷದಿಂದ ಉಚಿತವಾಗಿ ತಲೆಕೂದಲು ಕತ್ತರಿಸಿ ಕೊಡುತ್ತಿದ್ದೇನೆ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ವಿಕಾಸ ಜನ ಸೇವಾ ಟ್ರಸ್ಟ್‍ನಲ್ಲಿ ನೆಲೆಸಿದ್ದ ವೃದ್ಧರಿಗೆ ಮಾದಾಪುರ ಆಸುಪಾಸಿನಲ್ಲಿ ಅನಾರೋಗ್ಯದಿಂದ ಮನೆಯಲ್ಲಿ ನೆಲೆಸಿರುವ ಆನೇಕ ಮಂದಿಯ ತಲೆಕೂದಲು ಹಾಗೂ ಗಡ್ಡವನ್ನು ಉಚಿತವಾಗಿ ತೆಗೆಸಿ ಕೊಡುವ ಮೂಲಕ ಧನ್ಯತೆಯನ್ನು ಕಂಡುಕೊಂಡಿದ್ದೇನೆ’ ಎನ್ನುತ್ತಾರೆ.

ನನ್ನ ಸೇವೆಯನ್ನು ಕೊಡಗಿನಾದ್ಯಂತ ಇರುವ ವೃದ್ಧಾಶ್ರಮ, ಅನಾಥಶ್ರಮದಲ್ಲಿ ನೆಲೆಸಿರುವವರಿಗೂ ವಿಸ್ತರಿಸುವ ಅಭಿಲಾಷೆ ಇದೆ. ಯಾರಾದರೂ ಸಂಘ ಸಂಸ್ಥೆಯವರು, ದಾನಿಗಳು ವಾಹನದ ವ್ಯವಸ್ಥೆ ಕಲ್ಪಿಸಿದರೆ ನನ್ನ ಆಸೆ ಈಡೇರಿಸಬಹುದೆಂದು ಮುಕ್ತ ನುಡಿಯಾಡಿದರು. ಧರ್ಮೇಂದ್ರ ಅವರ ಮೊಬೈಲ್ ಸಂಖ್ಯೆ 9916156151.

-ಬಿ.ಡಿ.ರಾಜುರೈ