ಕುಶಾಲನಗರ, ಫೆ. 10: ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅರ್ಹತೆ ಹೊಂದಿರುವ ಕುಶಾಲನಗರವನ್ನು ನೂತನ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ಕಾರ್ಯಕರ್ತರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಶಕಗಳಿಂದಲೂ ಅಧಿಕ ಕಾಲದಿಂದ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರೂ ಕೂಡ ಇದುವರೆಗೆ ಸರ್ಕಾರ ಬೇಡಿಕೆಗೆ ಮನ್ನಣೆ ನೀಡದಿರುವದು ದುರಾದೃಷ್ಟಕರ ಎಂದು ಕೆ.ಜಿ. ಮನು ದೂರಿದರು. ಈ ನಿಟ್ಟಿನಲ್ಲಿ ನಗರ ಬಿಜೆಪಿ ಜಿಲ್ಲೆಯ ಎಲ್ಲಾ ಪ್ರಮುಖರು ಹಾಗೂ ಕ್ಷೇತ್ರ ಶಾಸಕರ ಸಹಾಯದೊಂದಿಗೆ ಸರಕಾರದ ಗಮನ ಸೆಳೆಯಲು ಸದ್ಯದಲ್ಲಿಯೇ (ಮೊದಲ ಪುಟದಿಂದ) ನಿಯೋಗ ತೆರಳಲಾಗುವದು ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.ಪ್ರತಿಭಟನೆಯಲ್ಲಿ ಪ.ಪಂ. ಸದಸ್ಯರಾದ ಅಮೃತ್‍ರಾಜ್, ಡಿ.ಕೆ. ತಿಮ್ಮಪ್ಪ, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್, ಮುಳ್ಳುಸೋಗೆ ಗ್ರಾ.ಪಂ. ಸದಸ್ಯರಾದ ದೊಡ್ಡಣ್ಣ, ರುದ್ರಾಂಬಿಕೆ, ಮಾಜಿ ಪ.ಪಂ. ಸದಸ್ಯರಾದ ಎನ್.ಎನ್. ಚರಣ್, ಪುಂಡಾರೀಕಾಕ್ಷ, ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯ ದರ್ಶಿ ಹೆಚ್.ಡಿ. ಶಿವಾಜಿರಾವ್, ತಾಲೂಕು ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಪ್ರಮುಖರಾದ ಜಿ.ಎಲ್. ನಾಗರಾಜು, ಪಿ.ಪಿ. ಸತ್ಯನಾರಾಯಣ್, ಭರತ್ ಮಾಚಯ್ಯ, ಶಿವಕುಮಾರ್, ಶಿವರಾಜ್, ಪಾಪು, ಅಣ್ಣಯ್ಯ ಮತ್ತಿತರರು ಇದ್ದರು.