ಸೋಮವಾರಪೇಟೆ,ಫೆ.11: ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಬಹುತೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಆದರೆ ಸೋಮವಾರಪೇಟೆ ಪಟ್ಟಣದಲ್ಲಿ ಮಾತ್ರ ಈ ಕ್ಯಾಂಟೀನ್‍ನ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.
ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡಂತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಮಾರು 8.5 ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಅದರಂತೆ ಕ್ಯಾಂಟೀನ್‍ನ ತಳಪಾಯದ ಕಾಮಗಾರಿ ಮುಕ್ತಾಯಗೊಂಡಿದೆ.
ತಳಪಾಯ ಕಾಮಗಾರಿ ಮುಕ್ತಾಯಗೊಂಡು ಎರಡೂವರೆ ತಿಂಗಳು ಕಳೆದರೂ ಸಹ ಇಂದಿಗೂ ಕಟ್ಟಡದ ಕಾಮಗಾರಿ ಪ್ರಾರಂಭವಾಗಿಲ್ಲ. ಇಂದಿರಾ ಕ್ಯಾಂಟೀನ್‍ಗೆ ಪಟ್ಟಣ ಪಂಚಾಯಿತಿಯಿಂದ 8.5 ಸೆಂಟ್ಸ್ ಜಾಗವನ್ನು ನೀಡಲಾಗಿದ್ದು, ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ.
ಪ್ರಸ್ತುತ ಪ್ಲಾಟ್‍ಫಾರಂ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಮೋಲ್ಡ್ ಗಳನ್ನು ತಂದು ಅಳವಡಿಸಬೇಕಿದೆ. ಮುಂದಿನ ಒಂದೆರಡು ವಾರಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಇಂಜಿನಿಯರ್ ವೀರೇಂದ್ರ ಅವರು ಎರಡು ವಾರಗಳ ಹಿಂದೆಯೇ ತಿಳಿಸಿದ್ದರೂ ಸಹ ಇಂದಿಗೂ ಕಾಮಗಾರಿ ಪ್ರಾರಂಭವಾಗಿಲ್ಲ.
ಇಂದು ಪ್ರತಿಭಟನೆ: ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಾಮಗಾರಿ ಯನ್ನು ತಕ್ಷಣ ಪೂರ್ಣಗೊಳಿಸಿ, ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು ಎಂದು ಆಗ್ರಹಿಸಿ ತಾ. 12ರಂದು (ಇಂದು) ಬೆಳಿಗ್ಗೆ 10.30ಕ್ಕೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ನಡೆಸುವದಾಗಿ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದ್ದಾರೆ.