ಮಡಿಕೇರಿ, ಫೆ.10 : ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಭೂಮಿ ಕಳೆದುಕೊಂಡ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ವಾಗಿ ಮನ್ನಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಆಯಾ ಜಿಲ್ಲೆಗಳ ಮಾರ್ಗದರ್ಶಿ (ಲೀಡ್) ಬ್ಯಾಂಕ್‍ಗಳಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬೆಳೆಗಾರರ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್ ಹಾಗೂ ಕೊಡಗು ಬೆಳೆಗಾರರ ಸಂಸ್ಥೆಯ ಅಧ್ಯಕ್ಷ ಜಿ.ಕೆ.ರಾಜೀವ್ ಅವರುಗಳು, ಕಳೆದ ನಾಲ್ಕು ವರ್ಷಗಳಿಂದ ಅನಾವೃಷ್ಟಿ, ಕಾಫಿ ಬೆಲೆ ಕುಸಿತ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬೆಳೆಗಾರರು ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ಒಕ್ಕೂಟ ಕಾಫಿ ಬೆಳೆಗಾರರ ರಕ್ಷಣೆಗೆ ಬರುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆದಿತ್ತು. ಕಳೆದ ಅಕ್ಟೋಬರ್‍ನಲ್ಲಿ ಸಂಘಟನೆಗಳು ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮೇರೆಗೆ ಈ ಸಂಬಂಧ ಟಾಸ್ಕ್‍ಫೋರ್ಸ್ ರಚಿಸಿ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ವಾಣಿಜ್ಯ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದ ಮೇರೆಗೆ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಯವರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ರಚಿಸಿ ಹಲವು ಸುತ್ತಿನ ಚರ್ಚೆ ನಡೆಸಿದ್ದು, ಅದರ ಅನ್ವಯ ಬೆಳೆಗಾರರಿಗೆ ತಕ್ಷಣ, ಮಧ್ಯಂತರ ಹಾಗೂ ದೀರ್ಘಾವಧಿ ಯಲ್ಲಿ ಆಗಬೇಕಾಗಿರುವ ಪರಿಹಾರ ಗಳನ್ನು ಪಟ್ಟಿ ಮಾಡಿ ಜ.31ರಂದು ನೀಡಲಾಗಿದೆ ಎಂದು ವಿವರಿಸಿದರು.

ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಭೂಮಿ ಕಳೆದು ಕೊಂಡಿರುವ ಕಾಫಿ ಬೆಳೆಗಾರರ ಎಲ್ಲಾ ಸಾಲವನ್ನು ಮನ್ನಾ ಮಾಡುವ ಮೂಲಕ ಅವರನ್ನು ಋಣ ಮುಕ್ತರ ನ್ನಾಗಿ ಮಾಡಬೇಕು, ಇತರ ಬೆಳೆಗಾರರು ಕೂಡ ಸಂಕಷ್ಟದಲ್ಲಿರು ವದರಿಂದ ಅವರು ಪಡೆದಿರುವ ಎಲ್ಲಾ ಬೆಳೆ ಸಾಲದ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವದ ರೊಂದಿಗೆ ಆ ಸಾಲಗಳನ್ನು ಮರು ಹೊಂದಾಣಿಕೆ ಮಾಡಬೇಕು, ಭೂಕುಸಿತದಿಂದಾಗಿ ಹಾರಂಗಿ ಜಲಾಶಯಕ್ಕೆ ನೀರು ಒದಗಿಸುವ ಜಲಮೂಲಗಳಲ್ಲಿ ಹಾಗೂ ಜಲಾಶಯದಲ್ಲಿ ಹೂಳು ತುಂಬಿರು ವದರಿಂದ ಹೂಳೆತ್ತುವ ಕಾರ್ಯ ಆರಂಭಿಸಬೇಕು, ಮುಂದಿನ ದಿನಗಳಲ್ಲಿ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆವಹಿಸುವ ನಿಟ್ಟಿನಲ್ಲಿ ಜಲಾಶಯದ ನಿರ್ವಹಣೆಗಾಗಿ ಪ್ರಾಧಿಕಾರವನ್ನು ರಚಿಸಬೇಕು, ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ರಸ್ತೆ ಸೇರಿದಂತೆ ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯೊಂದಿಗೆ ವೈಜ್ಞಾನಿಕ ರೂಪದಲ್ಲಿ ಕಾಮಗಾರಿ ಗಳನ್ನು ನಿರ್ವಹಿಸಬೇಕು ಎಂಬ ಸಲಹೆಗಳನ್ನು ಟಾಸ್ಕ್‍ಫೋರ್ಸ್‍ಗೆ ನೀಡಲಾಗಿದೆ ಎಂದು ಪ್ರಮುಖರು ಹೇಳಿದರು.

ಉಳಿದಂತೆ ಬೆಳೆಗಾರರಿಗೆ ಶೇ.3ರ ಬಡ್ಡಿ ದರದಲ್ಲಿ ಹೊಸ ಸಾಲ ನೀಡಬೇಕು. ಭೂ ಕುಸಿತದಿಂದ ಭೂಮಿ ಕಳೆದುಕೊಂಡ ಬೆಳೆಗಾರರಿಗೆ ಭೂಮಿಯ ಮೌಲ್ಯ, ಮೂಲಭೂತ ಸೌಕರ್ಯ, ಮರದ ಮೌಲ್ಯ, ತೋಟಗಾರಿಕಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡಿ ಸಮರ್ಪಕವಾದ ಪರಿಹಾರವನ್ನು ಒದಗಿಸಬೇಕು. ಮಾನವ-ವನ್ಯಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕುವದು, ಮುಂದಿನ ದಿನಗಳಲ್ಲಿ ಕಾಫಿ ಸೇರಿದಂತೆ ಇತರ ವಾಣಿಜ್ಯ, ತೋಟಗಾರಿಕಾ ಹಾಗೂ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕುವಂತೆ ದೀರ್ಘಾವಧಿ ಯೋಜನೆ ರೂಪಿಸುವದೂ ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಬೆಳೆಗಾರರ ಸಂಸ್ಥೆಯ ನಿರಂತರ ಹೋರಾಟದ ಫಲವಾಗಿ ಇದೀಗ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿಯು ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಕಾಫಿ ಬೆಳೆಗಾರರು ಪಡೆದಿರುವ ಸಾಲ ಮನ್ನಾ ಮಾಡುವ ದಿಸೆಯಲ್ಲಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅದರಂತೆ ಈ ಮೂರು ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್‍ಗಳು ಹಾಗೂ ಜಿಲ್ಲಾಡಳಿತ ಸಂಬಂಧಿಸಿದ ಮಾಹಿತಿಯನ್ನು ಆದಷ್ಟು ಶೀಘ್ರ ಒದಗಿಸುವಂತಾಗಬೇಕು. ಈಗಾಗಲೇ ಉಪಗ್ರಹದ ಮೂಲಕ ಸಂಗ್ರಹಿಸಿದ ಮಾಹಿತಿಯ ಅನ್ವಯ 9 ಗ್ರಾಮಗಳಲ್ಲಿ 100ರಿಂದ 250 ಹೆಕ್ಟೇರ್, 17 ಗ್ರಾಮಗಳಲ್ಲಿ 31ರಿಂದ 100 ಹೆಕ್ಟೇರ್, 13 ಗ್ರಾಮಗಳಲ್ಲಿ 16ರಿಂದ 30 ಹೆಕ್ಟೇರ್ ಹಾಗೂ 4 ಗ್ರಾಮಗಳಲ್ಲಿ 1ರಿಂದ 29 ಹೆಕ್ಟೇರ್ ಭೂಮಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಾಸ ಜಿಲ್ಲೆಯ 2 ಗ್ರಾಮಗಳಲ್ಲಿ 31ರಿಂದ 100 ಹೆಕ್ಟೇರ್ ಹಾಗೂ 31 ಗ್ರಾಮಗಳಲ್ಲಿ 1ರಿಂದ29 ಹೆಕ್ಟೇರ್ ಭೂಮಿಗೆ ಹಾನಿಯಾಗಿರುವದಾಗಿ ಹೇಳಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಆಯಾ ಗ್ರಾಮಗಳಿಗೆ ತೆರಳಿ ಅಧಿಕೃತವಾದ ಮಾಹಿತಿಯನ್ನು ಕಲೆಹಾಕುವ ನಿಟ್ಟಿನಲ್ಲಿ ಈ ಜಿಲ್ಲೆಗಳಿಗೆ ಒಂದು ವಾರದ ಮಟ್ಟಿಗೆ ಹೆಚ್ಚುವರಿ ಸರ್ವೆಯರ್‍ಗಳನ್ನು ನೇಮಕ ಮಾಡುವಂತೆಯೂ ಕಂದಾಯ ಇಲಾಖೆ ಕಾರ್ಯದರ್ಶಿಗಳನ್ನು ಒತ್ತಾಯಿಸಲಾಗಿದೆ ಎಂದು ವಿಶ್ವನಾಥ್ ವಿವರಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಬೆಳೆಗಾರರ ಸಂಸ್ಥೆಯು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿದ್ದು, ಪ್ರಥಮ ಹಂತದಲ್ಲಿ ಸಂತ್ರಸ್ತ ಬೆಳೆಗಾರರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವಂತೆ ಒತ್ತಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಬೆಳೆಗಾರರ ಸಮಸ್ಯೆಗಳ ಬಗ್ಗೆಯೂ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎ.ದಿನೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮೋಹನ್ ಬೋಪಣ್ಣ, ಕೊಡಗು ನೆರೆ ಹಾಗೂ ಪ್ರಕೃತಿ ವಿಕೋಪ ಸಮಿತಿಯ ಸದಸ್ಯರಾದ ರಾಜನ್ ದೇವಯ್ಯ ಹಾಗೂ ಬಿ.ಎನ್.ರಮೇಶ್ ಉಪಸ್ಥಿತರಿದ್ದರು.