ಶನಿವಾರಸಂತೆ, ಫೆ. 11: ಇಂದು ವೈಜ್ಞಾನಿಕವಾಗಿ ಬದುಕು ಸಾಗುತ್ತಿರುವಾಗ ಹಿಂದಿನ ಕೃಷಿ ಪದ್ಧತಿ, ಪಶುಪಾಲನೆ ಕಣ್ಮರೆಯಾಗುತ್ತಿದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಅಭಿಪ್ರಾಯ ಪಟ್ಟರು.

ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಜಯದೇವ ಕಲಾವೇದಿಕೆಯಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಜಯದೇವ ಜಾನುವಾರುಗಳ ಜಾತ್ರಾ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದನಗಳ ಜಾತ್ರೆಗೆ ಬದಲಾಗಿ ಜನಗಳ ಜಾತ್ರೆಯಾಗುತ್ತಿದೆ. ಮುಂದಿನ ವರ್ಷ ಬಸವಣ್ಣನ ಮೂರ್ತಿಯ ಮೆರವಣಿಗೆ ಜತೆಯಲ್ಲಿ ರಥೋತ್ಸವ ನಡೆಯಬೇಕು. ಜಾತ್ರಾ ಮೈದಾನದಲ್ಲಿ ಶೌಚಾಲಯ ನಿರ್ಮಾಣವಾಗಬೇಕು. ಮೈದಾನದಲ್ಲಿ ಮರಗಿಡಗಳನ್ನು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಗಣನೀಯವಾಗಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವದು ವಿಷಾದನೀಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್ ಮಾತನಾಡಿ, ಹಿಂದಿನ ಕೃಷಿ ಉಪಕರಣಗಳನ್ನು ಇಂದು ಕಾಣಲು ಸಾಧ್ಯವಿಲ್ಲ. ಐಟಿಬಿಟಿ ಬಂದಿದ್ದರೂ ನಮ್ಮ ಸಂಸ್ಕøತಿ, ಬಾಂಧವ್ಯ ಎಲ್ಲವನ್ನೂ ಮುಂದಿನ ಪೀಳಿಗೆಗೆ ಬಿಟ್ಟು ಹೋಗಲು ಜಾತ್ರಾ ಸಂಪ್ರದಾಯ ಮುಂದುವರೆಯಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ ಮಾತನಾಡಿ, ಜಾತ್ರಾ ಮೈದಾನದ ಸುತ್ತ ತಂತಿ ಬೇಲಿ, ದ್ವಾರ ನಿರ್ಮಿಸಿ ರಕ್ಷಣೆ ಒದಗಿಸಲಾಗಿದೆ. ತನ್ನ ಅನುದಾನದಲ್ಲಿ ರೂ. 1 ಲಕ್ಷ ಜಾತ್ರಾ ಅಭಿವೃದ್ಧಿಗೆ ನೀಡುತ್ತೇನೆ ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಅನಂತಕುಮಾರ್, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಹಿರಿಯ ಸಹಕಾರಿ ಕೆ.ವಿ. ಮಂಜುನಾಥ್, ಜುಮಾ ಮಸೀದಿ ಗುರು ಜುಬೈರ್ ಮಾತನಾಡಿದರು.

ಜಾತ್ರಾ ಸಮಿತಿ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಸಂದೀಪ್, ಉಪಾಧ್ಯಕ್ಷೆ ರೂಪಾ, ಸದಸ್ಯ ಎಚ್.ಎಸ್. ಸೋಮಶೇಖರ್, ಪಿ.ಡಿ.ಒ. ಸ್ಮಿತಾ, ಪಶುವೈದ್ಯಾಧಿಕಾರಿ ಡಾ. ಎಂ. ಲತಾ, ನಿವೃತ್ತ ಶಿಕ್ಷಕ ಡಿ.ಬಿ. ಸೋಮಪ್ಪ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಪಿಎಸ್‍ಐ ಮರಿಸ್ವಾಮಿ, ಶಿಕ್ಷಕ ಕೃಷ್ಣ ಉಪಸ್ಥಿತರಿದ್ದರು.