ಸೋಮವಾರಪೇಟೆ, ಫೆ. 12: ಇಲ್ಲಿನ ಮಾರ್ಕೆಟ್ ಏರಿಯಾದ ಸಿ.ಕೆ. ಸುಬ್ಬಯ್ಯ ರಸ್ತೆಗೆ ಒತ್ತಿಕೊಂಡಂತಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಮುಂಭಾಗ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಆಗ್ರಹಿಸಿ ಸೋಮವಾರಪೇಟೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಸದಸ್ಯರು ಪ.ಪಂ. ಎದುರು ಪ್ರತಿಭಟನೆ ನಡೆಸಿದರು.

ಸುಮಾರು 8.5 ಸೆಂಟ್ಸ್ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ತಳಪಾಯ ಕಾಮಗಾರಿ ಮುಕ್ತಾಯಗೊಂಡು ಎರಡೂವರೆ ತಿಂಗಳು ಕಳೆದರೂ ಇಂದಿಗೂ ಕಟ್ಟಡದ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಆರೋಪಿಸಿದರು.

ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿದ್ದು, ಕಡಿಮೆ ವೆಚ್ಚದಲ್ಲಿ ಊಟ ನೀಡಲಾಗುತ್ತಿದೆ. ಸರ್ಕಾರದಿಂದಲೇ ಜಾರಿಯಾದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಸೋಮವಾರಪೇಟೆ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಹಿನ್ನೆಲೆ ತಕ್ಷಣ ಕ್ಯಾಂಟೀನ್ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಮುಂದಿನ ಒಂದು ವಾರದೊಳಗೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ, ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಈ ಸಂಬಂಧಿತ ಮನವಿ ಪತ್ರವನ್ನು ಮುಖ್ಯಾಧಿಕಾರಿ ನಟರಾಜ್ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜಪ್ಪ, ಹೆಚ್.ಓ. ಪ್ರಕಾಶ್, ಆನಂದ್, ಪಳನಿ ಸ್ವಾಮಿ, ಪ್ರಮುಖರಾದ ಹಸನಬ್ಬ ಸೇರಿದಂತೆ ಇತರರು ಭಾಗವಹಿಸಿದ್ದರು.