ಕುಶಾಲನಗರ, ಫೆ. 12: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರ ಬಿಜೆಪಿ ಕಾರ್ಯಕರ್ತರು ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡರು. ಕುಶಾಲನಗರ ಬಿಜೆಪಿ ಆಶ್ರಯದಲ್ಲಿ ನಡೆದ ರ್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ತೆರಳುವ ಮೂಲಕ ಸರಕಾರ ಕುಶಾಲನಗರವನ್ನು ತಾಲೂಕಾಗಿ ಘೋಷಣೆ ಮಾಡದ ಬಗ್ಗೆ ಆಕ್ರೋಷ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ನೂತನ ತಾಲೂಕು ಘೋಷಣೆ ಮಾಡುವಂತೆ ಆಗ್ರಹಿಸಿದರು.
ಕುಶಾಲನಗರ ಪಟ್ಟಣದ ಮೂಲಕ ತೆರಳಿದ ಬೈಕ್ ಜಾಥಾ ನಾಡ ಕಚೇರಿಯಲ್ಲಿ ಸಮಾರೋಪಗೊಂಡು ಕಂದಾಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಕಳೆದ 25 ವರ್ಷಗಳಿಂದ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಹೋರಾಟಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಸರಕಾರದ ನಿರ್ಲಕ್ಷ್ಯ ಹಾಗೂ ಕೆಲವು ಸ್ವಾರ್ಥ ಸಾಧಕರಿಂದ ನೂತನ ತಾಲೂಕು ರಚನೆಯಾಗುವಲ್ಲಿ ವೈಫಲ್ಯತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ, ಎಲ್ಲರ ವಿಶ್ವಾಸದೊಂದಿಗೆ ಸರಕಾರಕ್ಕೆ ಆಗ್ರಹ ಮಾಡಲಾಗುವದು ಎಂದರು.
ಪ್ರಮುಖರಾದ ಜಿ.ಎಲ್. ನಾಗರಾಜ್, ಬಿ.ಎಸ್.ದಿನೇಶ್ ಅವರುಗಳು ಮಾತನಾಡಿ, ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಒಳಗೊಂಡಿರುವ ಪ್ರಸ್ತಾವಿತ ಕಾವೇರಿ ತಾಲೂಕು ರಚನೆಗೆ ಸರಕಾರ ತಕ್ಷಣ ಮುಂದಾಗಬೇಕು ಎಂದರು.
ಮುಂದಿನ ಕೆಲವೇ ದಿನಗಳಲ್ಲಿ ದಾಖಲೆಗಳೊಂದಿಗೆ ನಿಯೋಗವೊಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಬಳಿ ಕಾವೇರಿ ತಾಲೂಕು ಘೋಷಣೆಗೆ ಒತ್ತಾಯಿಸಲಾಗುವದೆಂದು ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ತಿಳಿಸಿದರು.
ಈ ಸಂದರ್ಭ ರ್ಯಾಲಿಯಲ್ಲಿ ತಾಲೂಕು ಯುವಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಪಪಂ ಪ್ರತಿನಿಧಿಗಳು, ಪಕ್ಷದ ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.