*ಸಿದ್ದಾಪುರ, ಫೆ. 13: ಕಾಲೇಜು ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಡಿವೈಎಸ್‍ಪಿ ಸುಂದರ್ ರಾಜ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನಿನ್ನೆ ಸಿದ್ದಾಪುರದ ಟಾಟಾ ಎಸ್ಟೇಟ್‍ನಲ್ಲಿರುವ ಸಂಧ್ಯಾಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತ ಕೊಡಗು ಜಿಲ್ಲಾ ತುಳುವರ ಜಾನಪದ ಕೂಟದ ಜಿಲ್ಲಾಧ್ಯಕ್ಷ ಗೋಣಿಕೊಪ್ಪಲುವಿನ ಶೇಖರ್ ಬಂಡಾರಿ, ಭಾರತೀಯ ಜನತಾ ಪಕ್ಷದ ಇತರ ಹಿಂದುಳಿದ ವರ್ಗಗಳ ಹಾಗೂ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ್ ರಘು, ವೀರಾಜಪೇಟೆ ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ಎಂ. ಜನೀಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಅನಿಲ್ ಶೆಟ್ಟಿ, ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಂದಿಕಂಡ ಅಶೋಕ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎಂ.ಎ. ಆನಂದ್, ಮೊಗೇರ ಸಂಘದ ಗೌರವ ಅಧ್ಯಕ್ಷ ರವಿ, ಹಿಂದೂ ಪರ ಸಂಘಟನೆಗಳ ಪ್ರಮುಖರಾದ ಭಜರಂಗದಳದ ಪ್ರವೀಣ್, ಪ್ರಭಾಕರ್, ರತೀಶ್, ಶರಣ್, ಜಯಪ್ರಕಾಶ್, ಪ್ರಕಾಶ್, ನವೀನ್, ರಾಜ ರಂಜಿತ್, ಹಿಂದೂ ಜಾಗರಣ ವೇದಿಕೆಯ ಪ್ರಜಿತ್, ಬಿಜೆಪಿ ಯುವ ಮೋರ್ಚಾದ ಸುರೇಶ್ ನೆಲ್ಲಿಕಲ್, ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್ ಮುಂತಾದವರು ಪೊಲೀಸ್ ಠಾಣೆ ಎದುರು ಪ್ರತಿಭಟಿಸಿ ಕಾಣೆಯಾಗಿರುವ ವಿದ್ಯಾರ್ಥಿನಿಯನ್ನು ಮುಂದಿನ ಎರಡು ದಿನಗಳ ಒಳಗೆ ಪತ್ತೆ ಮಾಡಿಕೊಡಬೇಕು ತಪ್ಪಿದಲ್ಲಿ ಸಿದ್ದಾಪುರ ಬಂದ್ ನಡೆಸಿ ಪ್ರತಿಭಟಿಸಲಾಗುವದು ಎಂದು ಮನವಿ ಸಲ್ಲಿಸಿದರು.

ವಿದ್ಯಾರ್ಥಿನಿಯ ಮನೆಯವರು ಮತ್ತು ತೋಟ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದರೂ ಪೊಲೀಸ್ ಅಧಿಕಾರಿಗಳು ಶೀಘ್ರದಲ್ಲಿ ಪತ್ತೆ ಹಚ್ಚುವದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ.