ಮಡಿಕೇರಿ, ಫೆ. 12: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಹಾರಂಗಿ ನದಿಗೆ ನೀರು ಹರಿಯುವ ಮಾರ್ಗದ ನದಿಪಾತ್ರದಲ್ಲಿ ಮತ್ತು ಕಣಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಲು ಸರಕಾರ ಮುಂದಾಗಿರುವ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಸಮಸ್ಯೆಯ ಕುರಿತಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದ್ದ ಸಂದರ್ಭ ಈ ವಿಚಾರ ಸರಕಾರದ ಗಮನಕ್ಕೆ ಬಂದಿಲ್ಲ ಎಂಬ ಉತ್ತರ ದೊರೆತಿದ್ದು, ಗಮನಾರ್ಹವಾಗಿತ್ತು. ಇದೇ ವಿಚಾರದ ಕುರಿತು ಇದೀಗ ವೀಣಾ ಅಚ್ಚಯ್ಯ ಅವರು ಮತ್ತೊಮ್ಮೆ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಈ ವಿಚಾರದ ಬಗ್ಗೆ ಸಚಿವರನ್ನು ಖುದ್ದಾಗಿಯೂ ಭೇಟಿಮಾಡಿ ಸಮಸ್ಯೆ ಕುರಿತು ಚರ್ಚೆ ನಡೆಸಿದ್ದರು.

ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲೂ ಈ ಪ್ರಶ್ನೆಯನ್ನು ಸದಸ್ಯರು ಮುಂದಿಟ್ಟಿದ್ದು, ಇದಕ್ಕೆ ಸಚಿವ ಡಿ.ಕೆ.ಶಿ. ಉತ್ತರ ನೀಡಿದ್ದಾರೆ.

ಪ್ರಕೃತಿ ವಿಕೋಪದ ಸಂದರ್ಭ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನದಿಯಲ್ಲಿ ಅತಿ ಹೆಚ್ಚಿನ ಹೂಳು ತುಂಬಿರುವದು ಸರಕಾರದ ಗಮನಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ. ಮಾತ್ರವಲ್ಲದೆ ಹಾರಂಗಿ ನದಿಗೆ ನೀರು ಸೇರುವ ನದಿ ಪಾತ್ರ ಮತ್ತು ಕಣಿವೆಯಲ್ಲಿ ಹೂಳು ತುಂಬಿರುವ ಕುರಿತು ಅಧ್ಯಯನ ನಡೆಸಲು ಸರ್ವೆ ಕಾರ್ಯಕ್ಕಾಗಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ವತಿಯಿಂದ ಟೆಂಡರ್ ಆಹ್ವಾನಿಸಿ ಇದನ್ನು ಮಂಗಳೂರಿನ ಮೇಜಿಯೋ ಮೆರೈನ್ ಸೊಲ್ಯೂಷನ್ಸ್ ಸಂಸ್ಥೆಗೆ ವಹಿಸಲಾಗಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ಅಲ್ಲದೆ 2019-20ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗಳಿಗೆ ರೂ. 75 ಕೋಟಿಗಳ ಅನುದಾನವನ್ನೂ ನಿಗದಿಪಡಿಸಲಾಗಿದೆ ಎಂದು ಘೋಷಿಸಲಾಗಿದೆ ಎಂದು ಸಚಿವರು ವೀಣಾ ಪ್ರಶ್ನೆಗೆ ಮಾಹಿತಿ ಒದಗಿಸಿದ್ದಾರೆ.

ಸರ್ವೆ ಕಾರ್ಯ ಪೂರ್ಣಗೊಂಡ ನಂತರ ಹೂಳಿನ ಪ್ರಮಾಣವನ್ನು ಅಂದಾಜಿಸಿ ತಾಂತ್ರಿಕ ಸಲಹೆಗಳಂತೆ ಸಿಲ್ಟ್ ಡಿಸ್‍ಪೋಸಲ್ ಪ್ಲಾನ್ ತಯಾರಿಸಿ ಹೂಳನ್ನು ತೆಗೆದು ವಿಲೇವಾರಿ ಮಾಡಲಾಗುವದು ಹಾಗೂ ಅಕ್ಕಪಕ್ಕದ ಜಮೀನುಗಳು ಹಾನಿಯಾಗದಂತೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಪರಿಶೀಲಿಸಿ ಅಗತ್ಯತೆಗನುಗುಣವಾಗಿ ಕ್ರಮಕೈಗೊಳ್ಳಲಾಗುವದು ಎಂದು ಸಚಿವರು ವಿವರವಿತ್ತಿದ್ದಾರೆ.