*ಗೋಣಿಕೊಪ್ಪಲು, ಫೆ. 14: ಅಪಘಾತವೆಂಬದು ಹೇಳಿ ಕೇಳಿ ಆಗುವದಿಲ್ಲ. ಇದರಿಂದ ಪ್ರಾಣ ರಕ್ಷಿಸಿಕೊಳ್ಳುವದಕ್ಕಾಗಿ ಮುನೆÀ್ನಚ್ಚರಿಕೆ ವಹಿಸುವದು ಅಗತ್ಯ ಎಂದು ಪೊನ್ನಂಪೇಟೆ ಸಬ್ ಇನ್ಸ್‍ಪೆಕ್ಟರ್ ಮಹೇಶ್ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಸ್ತೆ ಸುರಕ್ಷತಾ ಜಾಥಾದಲ್ಲಿ ಮಾತನಾಡಿದ ಅವರು, ಮೋಟಾರ್ ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವದು ಕಡ್ಡಾಯ. ಇದರಿಂದ ಶೇ 90 ರಷ್ಟು ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.

ಮದ್ಯಪಾನ ಮಾಡಿಯೂ ವಾಹನ ಚಾಲಿಸಬಾರದು. ಮದ್ಯಪಾನ ಮಾನಸಿಕ ಸ್ತಿಮಿತತೆಯನ್ನು ಕಡಿಮೆ ಮಾಡುತ್ತದೆ. ಮನಸ್ಸು ನಿಯಂತ್ರಣದಲ್ಲಿ ಇಲ್ಲದೆ ಇರುವಾಗ ಅಪಘಾತಗಳು ಸಂಭವಿಸುತ್ತವೆ. ಕೆಲವು ಸಂದರ್ಭದಲ್ಲಿ ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇದ್ದರೂ ಎದುರು ಬರುವವರು ಎಚ್ಚರವಿರದಿದ್ದರೆ ಅಪಾಯ ಹೆಚ್ಚು. ಇದಕ್ಕಾಗಿ ವಾಹನ ವಿಮೆ ಮಾಡಿಸುವದು ಕಡ್ಡಾಯವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ತಿಳುವಳಿಕೆ ಹೇಳಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿದೆ. ಮೊಬೈಲ್ ಮೂಲಕ ಕಳಿಸುವ ಕೆಟ್ಟ ಸಂದೇಶಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವೆನೆಯಿಂದಲೂ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ ಕಾನೂನು ಅರಿವಿನ ಕೊರತೆಯಿಂದ ಅಪರಾಧಗಳು ಹೆಚ್ಚುತ್ತಿವೆ. ಇಂತಹ ಅರಿವನ್ನು ಮೂಡಿಸಿ ಅಪರಾಧ ಪ್ರಮಾಣವನ್ನು ಕುಗ್ಗಿಸುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿರುವದು ಶ್ಲಾಘನೀಯ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವದರಿಂದ ಇಲಾಖೆಯ ಬಗ್ಗೆ ಜನತೆಗೆ ಇದ್ದ ಭಯ, ಆತಂಕ ದೂರವಾಗಿದೆ ಎಂದು ಹೇಳಿದರು. ಎಎಸ್‍ಐ ಪಿ. ಉದಯಕುಮಾರ್ ಪೊಲೀಸ್ ಸಿಬ್ಬಂದಿಗಳಾದ ಎಸ್. ಮಣಿಕಂಠ, ಉಪನ್ಯಾಸಕರಾದ ಎನ್.ಕೆ. ಪ್ರಭು, ಎಂಪಿ. ರಾಘವೇಂದ್ರ, ಡಿ.ಎನ್. ಸುಬ್ಬಯ್ಯ, ಬೆನಡಿಕ್ಟ್ ಫರ್ನಾಂಡೀಸ್, ತಮ್ಮರಾಜು, ಜಯಣ್ಣ ಹಾಜರಿದ್ದರು.