ಮಡಿಕೇರಿ, ಫೆ. 14: ಬೆಂಗಳೂರು ಕೊಡವ ಸಮಾಜದ ವತಿಯಿಂದ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆಯನ್ನು ಕೊಡವ ಸಾಂಸ್ಕøತಿಕ ದಿನವಾಗಿ ಆಚರಣೆ ಮಾಡಲಾಯಿತು. ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಷಂಪ್ರತಿ ಈ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸುವಂತಾಗ ಬೇಕೆಂದು ನೆರೆದಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ಜನರಲ್ ಪಾರುವಂಗಡ ಎಂ. ಕಾರ್ಯಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ. ಕಾರ್ಯಪ್ಪ ಅವರುಗಳು ಪಾಲ್ಗೊಂಡಿದ್ದರು. ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಪಾರುವಂಗಡ ಕಾರ್ಯಪ್ಪ ಅವರು ಫೀ. ಮಾ. ಕಾರ್ಯಪ್ಪ ಅವರ ಬದುಕು ಹಾಗೂ ಕೊಡವ ಜನಾಂಗದ ಆಚಾರ - ವಿಚಾರದ ಕುರಿತು ಮಾತನಾಡಿದರು.

ಸಾಂಸ್ಕøತಿಕ ಸ್ಪರ್ಧೆಯಲ್ಲಿ ದಾಸರಹಳ್ಳಿ ಕೊಡವ ಸಂಘ ಪ್ರಥಮ, ಕೆಂಗೇರಿಯ ಫೀ.ಮಾ. ಕಾರ್ಯಪ್ಪ ಕೊಡವ ಒಕ್ಕೂಟ ದ್ವಿತೀಯ ಹಾಗೂ ಕೆ.ಆರ್. ಪುರಂನ ಕಾವೇರಿ ಕೊಡವ ಸಂಘ ತೃತೀಯ ಬಹುಮಾನಗಳಿಸಿತು. ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಚಿರಿಯ ಪಂಡ ಆಶಾವಿವೇಕ್, ಸಂಚಾಲಕರು ಗಳಾದ ಕೊಪ್ಪಿರ ಅಯ್ಯಪ್ಪ, ಮೂಡೆರ ತಮ್ಮಯ್ಯ ಹಾಗೂ ತಂಡದ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು. ಯಲಹಂಕ ಕೊಡವ ಸಂಘದ ಉಮ್ಮತ್ತಾಟ್, ಕೆಂಗೇರಿ ಒಕ್ಕೂಟದ ಕತ್ತಿಯಾಟ್, ದಾಸರಹಳ್ಳಿ ಇಗ್ಗುತಪ್ಪ ಕ್ಷೇಮಾಭಿವೃದ್ಧಿ ಸಂಘ, ವಿದ್ಯಾರಣ್ಯಪುರ ಪೊಮ್ಮಾಲೆ ಕೊಡವ ಸಂಘದ ಗುಂಪು ನೃತ್ಯ ಗಮನ ಸೆಳೆಯಿತು. ಬೊಟ್ಟೋಳಂಡ ಆಶಿತ ಬೋಪಣ್ಣ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಸ್ವಾಗತಿಸಿದರು. ಉಪಾಧ್ಯಕ್ಷೆ ಮಲ್ಲೇಂಗಡ ಮೀರಜಲಜಕುಮಾರ್ ವಂದಿಸಿದರು. ಊಟೋಪಚಾರ ಸಮಿತಿ ಅಧ್ಯಕ್ಷ ಚಂಗಂಡ ಸುಬ್ರಮಣಿ ಮತ್ತಿತರರು ಹಾಜರಿದ್ದರು.